“ಮತ್ತೆ ಪರೀಕ್ಷೆ ಬರೆಯಲು ಧೈರ್ಯವಿಲ್ಲ” ಎಂದು ಬರೆದಿಟ್ಟು ಮರುಪರೀಕ್ಷೆಗೂ ಮುನ್ನವೇ ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ
Views: 23
ಕನ್ನಡ ಕರಾವಳಿ ಸುದ್ದಿ: ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಮೇ 3ರಂದು ನೀಟ್ ನೀಟ್-ಯುಜಿ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆಕಾಂಕ್ಷಾ ಚತುರ್ವೇದಿ ಕೂಡಾ ಒಬ್ಬರು. ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ಸಂಪೂರ್ಣ ಪರೀಕ್ಷೆಯನ್ನೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೇ 12ರಂದು ರದ್ದುಗೊಳಿಸಿದೆ. ಜೂನ್ 21ರಂದು ಮರು ಪರೀಕ್ಷೆ ನಡೆಯಲಿದೆ.
ಈ ಬೆಳವಣಿಗೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಆಕಾಂಕ್ಷಾ ಚತುರ್ವೇದಿ “ಮತ್ತೆ ಪರೀಕ್ಷೆ ಬರೆಯಲು ಧೈರ್ಯವಿಲ್ಲ” ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಕುಟುಂಬಸ್ಥರು ಹೇಳುವ ಪ್ರಕಾರ ಆಕಾಂಕ್ಷಾ ನೀಟ್ ಪರೀಕ್ಷೆಯಲ್ಲಿ ಸುಮಾರು 650 ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಬೆಳಕಿಗೆ ಬಂದ ಬಳಿಕ ಆಕಾಂಕ್ಷಾ ತೀವ್ರವಾಗಿ ನೊಂದಿದ್ದರು. ಆಕಾಂಕ್ಷಾಳ ಹೆತ್ತವರು ವೈದ್ಯೆಯಾಗುವ ಕನಸು ಸಾಕಾರಗೊಳಿಸಲು ಸಾಕಷ್ಟು ಸಾಲವನ್ನೂ ಮಾಡಿದ್ದರು ಎಂದು ಹೇಳಲಾಗಿದೆ.






