ಶಾಲಾ ಬಸ್ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಸಾವು:ಇಬ್ಬರಿಗೆ ಗಾಯ
Views: 95
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಬೃಹತ್ ಗಾತ್ರದ ಮರ ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಯುಕೆಜಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಮೃತ ಬಾಲಕಿಯನ್ನು ಪೆರ್ನೆ ನಿವಾಸಿ ಚಂದ್ರಶೇಖರ್ ಅವರ ಪುತ್ರಿ ಯುಕೆಜಿ ವಿದ್ಯಾರ್ಥಿನಿ ಚಿರಣ್ವಿ (5) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಯನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಯನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಿಂದ ಮಕ್ಕಳನ್ನು ಕರೆದುಕೊಂಡು ಮಾಣಿ, ಅಲ್ಲಿಂದ ಬರಣಿಕೆರೆ, ಬರಿಮಾರು, ಕಲ್ಲೆಟ್ಟಿ ಮಾರ್ಗವಾಗಿ ಬುಡೋಳಿ ಮೂಲಕ ಪೆರ್ನೆಗೆ ತೆರಳುತ್ತಿದ್ದ ಶಾಲಾ ಬಸ್ ಮೇಲೆ, ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬುಡ ಸಮೇತ ಉರುಳಿ ಬಿದ್ದಿದೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಯ ತೀವ್ರತೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಬಸ್‌ನೊಳಗೆ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಕೂಡಲೇ ಧಾವಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.






