ಇತರೆ

‘ಮಗ ನೋಡಲು ನನ್ನಂತಿಲ್ಲ’ ಅನುಮಾನದಿಂದ ಪ್ರಾಣ ತೆಗೆದ ತಂದೆ

Views: 9

ಕನ್ನಡ ಕರಾವಳಿ ಸುದ್ದಿ: “ಮಗ ನೋಡಲು ನನ್ನಂತೆ ಇಲ್ಲ” ಎಂಬ ಕೀಳುಮಟ್ಟದ ಅನುಮಾನದಿಂದಾಗಿ ಹೆತ್ತ ತಂದೆಯೇ ತನ್ನ 6 ವರ್ಷದ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6 ವರ್ಷ) ಕೊಲೆಯಾದ ದುರ್ದೈವಿ ಬಾಲಕ. ಮಗನ ಪ್ರಾಣ ತೆಗೆದ ತಂದೆ ಮಲ್ಲಿಕಾರ್ಜುನ ಅರಕೇರಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಈ ಹತ್ಯೆಯ ಹಿಂದಿನ ಕಾರಣ ಕೇಳಿದರೆ ಸಮಾಜ ಎಷ್ಟು ವಿಕೃತವಾಗುತ್ತಿದೆ ಎಂಬುದು ಅರಿವಾಗುತ್ತದೆ. ಮಗು ಸಿದ್ದಾರ್ಥ ನೋಡಲು ತಂದೆ ಮಲ್ಲಿಕಾರ್ಜುನನಂತೆ ಇಲ್ಲ ಎಂದು ಗ್ರಾಮದ ಕೆಲವರು ನಿತ್ಯ ಚೇಡಿಸುತ್ತಿದ್ದರು. “ನಿನ್ನ ಮಗನ ಹೋಲಿಕೆ ನಿನಗಿಲ್ಲ” ಎಂಬ ಗ್ರಾಮಸ್ಥರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಮಲ್ಲಿಕಾರ್ಜುನ, ಮಗನ ಮೇಲೆ ಸಂಶಯಗೊಂಡು ಅವನನ್ನು ಇಲ್ಲವಾಗಿಸಲು ನಿರ್ಧರಿಸಿದ್ದ. ಈ ಸಂಶಯವೇ ಒಂದು ಹಸಿಗೂಸಿನ ಸಾವಿಗೆ ಮುನ್ನುಡಿ ಬರೆಯಿತು.

ಮಲ್ಲಿಕಾರ್ಜುನ ತನ್ನ ಕ್ರೂರ ಸಂಚನ್ನು ಕಾರ್ಯರೂಪಕ್ಕೆ ತರಲು ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಸುಳ್ಳು ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದ. ಬಾಲಕನನ್ನು ಮಲ್ಲಿಕಾರ್ಜುನ ತನ್ನ ಕ್ರೂರ ಸಂಚನ್ನು ಕಾರ್ಯರೂಪಕ್ಕೆ ತರಲು ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಸುಳ್ಳು ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದ. ಬಾಲಕನನ್ನು ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿಯ ಕೃಷ್ಣಾ ನದಿಯ ದಂಡೆಗೆ ಕರೆದೊಯ್ದು, ಅಲ್ಲಿ ಯಾರೂ ಇಲ್ಲದ ವೇಳೆ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಬಳಿಕ ಊರಿಗೆ ಮರಳಿದ ಆತ, ಮಗನನ್ನು ಸಿಂದಗಿ ಬಳಿಯ ಶಾಲೆಯ ಹಾಸ್ಟೆಲ್‌ಗೆ ಸೇರಿಸಿ ಬಂದಿರುವುದಾಗಿ ಪತ್ನಿ ಭಾಗ್ಯಶ್ರೀಗೆ ನಂಬಿಸಿದ್ದ.

ಆದರೆ ಏಪ್ರಿಲ್ 1 ರಂದು ಮಗು ಸಿದ್ದಾರ್ಥನ ಹುಟ್ಟುಹಬ್ಬವಿದ್ದ ಕಾರಣ, ಮಗನನ್ನು ಮನೆಗೆ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದಿದ್ದಾರೆ. ಈ ವೇಳೆ ಗಾಬರಿಗೊಂಡ ಮಲ್ಲಿಕಾರ್ಜುನ ಮಗ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಮನೆಯಿಂದ ಓಡಿ ಹೋಗಿದ್ದಾನೆ. ಪತಿಯ ವರ್ತನೆಯಿಂದ ಅನುಮಾನಗೊಂಡ ಭಾಗ್ಯಶ್ರೀ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಲ್ಲಿಕಾರ್ಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಂದಿದೆ.

ವಿಚಾರಣೆ ವೇಳೆ ತಾನು ಮಹಾರಾಷ್ಟ್ರದ ಕರಾಡ್ ಬಳಿ ಮಗನನ್ನು ನದಿಗೆ ತಳ್ಳಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕಾಕತಾಳೀಯವೆಂಬಂತೆ, ಮಾರ್ಚ್ 16ರಂದೇ ಕರಾಡ್‌ನ ಮಸೂರು ಠಾಣೆ ಪೊಲೀಸರು ನದಿಯಲ್ಲಿ ಪತ್ತೆಯಾದ ಅಪರಿಚಿತ ಬಾಲಕನ ಶವದ ಬಗ್ಗೆ ಪ್ರಕಟಣೆ ಹೊರಡಿಸಿದ್ದರು. ಆ ಶವದ ಫೋಟೋ ಮತ್ತು ಮಲ್ಲಿಕಾರ್ಜುನ ನೀಡಿದ ಹೇಳಿಕೆಯನ್ನು ತಾಳೆ ನೋಡಿದಾಗ ಅದು ಸಿದ್ದಾರ್ಥನ ಶವ ಎಂಬುದು ದೃಢಪಟ್ಟಿದೆ. ಕೇವಲ ಹೋಲಿಕೆಯಿಲ್ಲ ಎಂಬ ಕಾರಣಕ್ಕೆ ಮಗನನ್ನೇ ಕೊಂದ ತಂದೆಯ ಕ್ರೌರ್ಯಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Related Articles

Back to top button
error: Content is protected !!