ಶಿಕ್ಷಣ

ಮಂಗಳೂರು ವಿವಿ ಪದವಿ ತರಗತಿ ಆರಂಭ ಮುಂದೂಡಿಕೆ?

Views: 0

ಮಂಗಳೂರುವಿವಿ ವ್ಯಾಪ್ತಿಯಲ್ಲಿ ವಿವಿಧ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ನಡೆಯುತ್ತಿರುವುದರಿಂದ ಈ ವರ್ಷವೂ ಪದವಿ ತರಗತಿಗಳು ವಿಳಂಬವಾಗಿ ಆರಂಭವಾಗುತ್ತದೆ.

2023-24ನೇ ಸಾಲಿನ ಪದವಿ ತರಗತಿಗಳು ಆಗಸ್ಟ್1 ರಿಂದ ಆರಂಭ ಎಂದು ಮೊದಲು ನಿಗದಿಯಾಗಿತ್ತು. ಆದರೆ ಪರೀಕ್ಷೆಗಳು ನಡೆಯುತ್ತಿರುವ ಕಾರಣ ವಿವಿಯು ಇದನ್ನು ಅಗಸ್ಟ್ 17ಕ್ಕೆ ಮುಂದೂಡಿತ್ತು. ಈ ಮಧ್ಯೆ ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೀತಿಯ ಶೈಕ್ಷಣಿಕ ವೇಳಾಪಟ್ಟಿಯಡಿ 17 ರಿಂದಲೇ ಪದವಿ ತರಗತಿ ಆರಂಭಿಸುವಂತೆ ಸರಕಾರ ಸೂಚನೆ ನೀಡಿತ್ತು. ಆದರೆ ಅದು ಕಷ್ಟ.ಅಗಸ್ಟ್ 14ಕ್ಕೆ ಆರಂಭಿಸುವ ಬಗ್ಗೆ ವಿವಿ ತಿಳಿಸಿತ್ತು. ಈ ದಿನಾಂಕದಿಂದಲೂ ತರಗತಿ ನಡೆಸಲು ಅಸಾಧ್ಯವಾಗಿದೆ.

ಮಳೆಯ ಕಾರಣ ರದ್ದಾದ ಪರೀಕ್ಷೆಗಳು ಅಗಸ್ಟ್ 16ರ ವರೆಗೆ ನಡೆಯಲಿದೆ ಬಳಿಕ ಮೌಲ್ಯಮಾಪನ ನಡೆಯಬೇಕಿದೆ. ಉಪನ್ಯಾಸಕರೆಲ್ಲರೂ ಮೌಲ್ಯಮಾಪನಕ್ಕೆ ಹೋದರೆ ಹೊಸ ತರಗತಿ ಆರಂಭಿಸುವುದು ಹೇಗೆ ಎಂಬುದು ಪ್ರಶ್ನೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಮೇಲೆ ಪ್ರಥಮ ಪದವಿ ಆರಂಭವಾಗಿತ್ತು. ಮಕ್ಕಳಿಗೆ ಮಾತ್ರ ಇನ್ನೂ ತರಗತಿಗೆ ಬರುವ ಅವಕಾಶ ಲಭಿಸಿಲ್ಲ . ಸ್ವಾಯತ್ತ ಕಾಲೇಜುಗಳಲ್ಲಿ ಮಾತ್ರ ಈಗಾಗಲೇ ಪದವಿ ತರಗತಿ ನಡೆಯುತ್ತಿದೆ.

ಕಾಲೇಜು ಆರಂಭವನ್ನು ಮತ್ತೆ ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಮುಂದಿನ ಪರೀಕ್ಷೆ -ಫಲಿತಾಂಶಗಳು ತಡವಾಗಿ ಅವರಿಗೆ ನಾನಾ ಸಮಸ್ಯೆಗಳು ಮುಂದೆ ಉದ್ಭವಿಸುತ್ತದೆ ಎಂದು ಪೋಷಕರು ಮತ್ತು ಉಪನ್ಯಾಸಕರುಗಳಿಂದ ಅಭಿಪ್ರಾಯ ಕೇಳಿಬಂದಿದೆ.

ಅಗಸ್ಟ್ 14ರಂದು 2023-24ನೇ ಪದವಿ ತರಗತಿಯ ಆರಂಭಕ್ಕೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮೌಲ್ಯಮಾಪನದಿಂದ ಕಷ್ಟವಾಗಬಹುದು ಎಂದು ಉಪನ್ಯಾಸಕರು ವಿ ವಿ ಗಮನಕ್ಕೆ ತಂದಿದ್ದಾರೆ. ಆಗಸ್ಟ್ 8ರಂದು ನಡೆಯುವ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ತಿಳಿಸಿದ್ದಾರೆ.

Related Articles

Back to top button