ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು
Views: 50
ಕನ್ನಡ ಕರಾವಳಿ ಸುದ್ದಿ: ಭದ್ರಾ ನಾಲೆಯಲ್ಲಿ ಮುಳುಗಿ ಅಂತಿಮ ಸೆಮಿಸ್ಟರ್‌ನ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಎಚ್.ಎಸ್.ವಿವೇಕ್(22) ಹಾಗೂ ಮಾನಸಿ ಶಿಂಧೆ(21) ಮೃತಪಟ್ಟ ವಿದ್ಯಾರ್ಥಿಗಳು.
ನಾಲೈದು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್ ಮುಗಿಸಿಕೊಂಡು ಬಂದಿದ್ದಂತಹ ಆರು ವಿದ್ಯಾರ್ಥಿನಿಯರ ತಂಡ ವಾಯು ವಿಹಾರಕ್ಕೆಂದು ಮರಬನಹಳ್ಳಿಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.
ಮರಬನಹಳ್ಳಿ ಬಳಿ ಭದ್ರಾ ನಾಲೆಯಲ್ಲಿ ವಿದ್ಯಾರ್ಥಿಗಳ ಪೈಕಿ ಓರ್ವ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಆತನ ರಕ್ಷಣೆಗೆ ಮುಂದಾದ ಇನ್ನೊಬ್ಬ ವಿದ್ಯಾರ್ಥಿಯೂ ನೀರಿನ ಸೆಳೆತಕ್ಕೆ ಸಿಲುಕಿದ್ದು, ಇವರ ರಕ್ಷಣೆಗೆ ಮುಂದಾದ ಹತ್ತು ಜನರು ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ಕಿರುಚಾಡುತ್ತಿದ್ದ ಕೂಗು ಕೇಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ, ನಾಲೆಗೆ ಹಾರಿ 8 ಜನರನ್ನು ರಕ್ಷಣೆ ಮಾಡಿದ್ದಾರೆ.
ಈ ಪೈಕಿ ವಿವೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾನಸಿ ಶಿಂಧೆಯ ಪತ್ತೆಗಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದರೂ, ಸಂಜೆಯಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






