ಕರಾವಳಿ

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣ, ಸಬ್ ಇನ್ಸ್‌ಪೆಕ್ಟರ್ ಸಹಿತ ಇಬ್ಬರು ಅಮಾನತು

Views: 323

ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಸಬ್ ಇನ್ಸ್‌ಪೆಕ್ಟರ್  ಸೇರಿದಂತೆ ಇಬ್ಬರು ಪೊಲೀಸರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್‌ಕಾನ್‌ಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಿಐಡಿ ಪೊಲೀಸ್ ಅಧೀಕ್ಷಕರು ಹಾಗೂ ಇವರ ತಂಡ ಸೋಮವಾರ ಉಡುಪಿಗೆ ಆಗಮಿಸಿದ್ದು, ಪ್ರಕರಣದ ತನಿಖೆಯನ್ನು ಮುಂದುವರಿಸಲಿದ್ದಾರೆ.

ಬಿಜು ಮೋನು ಲಾಕಪ್‌ನಲ್ಲಿ ಮೃತಪಟ್ಟಿರುವ ಮಾಹಿತಿಯನ್ನು ಪೊಲೀಸರು ನ.10ರಂದು ಬೆಳಿಗ್ಗೆ ಕೊಲ್ಲಂನಲ್ಲಿರುವ ಆತನ ಕುಟುಂಬಸ್ಥರಿಗೆ ನೀಡಿದ್ದರು. ಅದರಂತೆ ಅಲ್ಲಿಂದ ಹೊರಟ ಕುಟುಂಬಸ್ಥರು ಬ್ರಹ್ಮಾವರ ತಲುಪಿದ್ದಾರೆ.

ಬೆಳಿಗ್ಗೆ ಶವಗಾರಕ್ಕೆ ಆಗಮಿಸಿದ ಕುಟುಂಬಸ್ಥರು ಬಿಜು ಮೋನು ಅವರ ಮೃತ ದೇಹವನ್ನು ಪರಿಶೀಲಿಸಿದ್ದರು. ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಮೃತ ಬಿಜು ಮೋನು ಅವರ ಚಿಕ್ಕಪ್ಪನ ಮಗ ಅನೀಶ್ ಡೆನಿಲ್ ನೀಡಿದ ದೂರಿ ನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Related Articles

Back to top button
error: Content is protected !!