ಬ್ಯಾಂಕಿನಲ್ಲಿ ನಿಮಗೆ ತಿಳಿಯದೆ ನಿಮ್ಮ ಹಣ ಇದೆಯೇ?

Views: 0
ಬೆಂಗಳೂರು: ಬ್ಯಾಂಕ್ ಖಾತೆ ಒಂದು ವರ್ಷದಿಂದ ಯಾವುದೇ ವ್ಯವಹಾರ ಇಲ್ಲದೆ ನಿಷ್ಕ್ರಿಯವಾಗಿದ್ದರೆ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯ ಪ್ರಕಾರ ಅದನ್ನು ‘ನಿಷ್ಕ್ರಿಯ ಖಾತೆ’ (Inoperative account) ಎಂದು ವರ್ಗೀಕರಿಸಲಾಗುತ್ತದೆ.
ಹತ್ತು ಮತ್ತು ಹೆಚ್ಚು ವರ್ಷಗಳ ವರೆಗೆ ನಿಷ್ಕ್ರಿಯವಾದ ಖಾತೆಗಳನ್ನು ಮತ್ತು ಅವಧಿ ಮುಗಿದ ಹತ್ತು ವರ್ಷಗಳ ನಂತರವೂ ಹಿಂಪಡೆಯದ ಠೇವಣಿಗಳನ್ನು ‘ವಾರಸುದಾರರಿಲ್ಲದ ಠೇವಣಿ’ಯಾಗಿ (Unclaimed Deposit) ಪರಿಗಣಿಸಲಾಗುತ್ತದೆ. ಈ ರೀತಿ ವಾರಸುದಾರರಿಲ್ಲದ ಠೇವಣಿಗಳನ್ನು ಬ್ಯಾಂಕುಗಳು ರಿಸರ್ವ್ ಬ್ಯಾಂಕಿಗೆ ವರ್ಗಾಯಿಸುತ್ತವೆ. ಹೀಗೆ ಸಾರ್ವಜನಿಕ ಬ್ಯಾಂಕುಗಳು 10.24 ಕೋಟಿ ಖಾತೆಗಳಿಗೆ ಸೇರಿದ 35012 ಕೋಟಿ ರೂಪಾಯಿಗಳನ್ನು ರಿಸರ್ವ್ ಬ್ಯಾಂಕಿಗೆ ವರ್ಗಾಯಿಸಿವೆ.
ಇಂತಹ ವಾರಸುದಾರರಿಲ್ಲದ ಖಾತೆ/ಠೇವಣಿಗಳ ಹುಟ್ಟಿಗೆ ಹಲವಾರು ಕಾರಣಗಳು ಇರಬಹುದು:
1. ಖಾತೆದಾರ ಮರೆತು ಬಿಟ್ಟಿರುವುದು.
2. ಖಾತೆದಾರ ಮರಣ ಹೊಂದಿರುವುದು ಮತ್ತು ಅವನ ವಾರಸುದಾರರಿಗೆ ಆ ಖಾತೆಯ ವಿಷಯ ತಿಳಿಯದಿರುವುದು.
3. ಮರಣಿಸಿದ ವ್ಯಕ್ತಿ ಸೂಕ್ತ ‘ನಾಮ ನಿರ್ದೇಶನ’ (Nomination) ಮಾಡದಿರುವುದು.
4. ಉಯಿಲು ಬರೆದಿಟ್ಟಿದ್ದರೂ ಅದು ವಾರಸುದಾರರಿಗೆ ತಿಳಿಯದೆ ಇರುವುದು.
5. ಉದ್ಯೋಗದಲ್ಲಿರುವ ವ್ಯಕ್ತಿ ವರ್ಗಾವಣೆಯಾದಾಗ ಹಿಂದಿನ ಊರಿನಲ್ಲಿರುವ ಖಾತೆಯನ್ನು ಮರೆತುಬಿಡುವುದು.
6. ಮರಣಿಸಿದ ವ್ಯಕ್ತಿ ತನ್ನ ಹಣಕಾಸು ವ್ಯವಹಾರಗಳನ್ನು ಕುಟುಂಬದ ಸದಸ್ಯರ ಗಮನಕ್ಕೆ ತರದೇ ಇರುವುದು.
7. ಹೀಗೆ ಇನ್ನೂ ಅನೇಕ ಕಾರಣಗಳು ಇರಬಹುದು.
ನಿಮ್ಮ ಅಥವಾ ನಿಮ್ಮವರ ಹೆಸರಿನಲ್ಲಿ ಇಂತಹ ಠೇವಣಿಗಳು ಇರುವುದು ತಿಳಿದುಬಂದಲ್ಲಿ, ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಆ ಹಣವನ್ನು ಹಿಂದಕ್ಕೆ ಪಡೆಯುವುದು ಸಾಧ್ಯವಿದೆ. ಬ್ಯಾಂಕ್ ಪಾಸ್ ಪುಸ್ತಕ, ಠೇವಣಿಯ ರಸೀದಿ, ಮೊದಲಾದ ಲಭ್ಯ ಪುರಾವೆಗಳನ್ನು ಬ್ಯಾಂಕಿಗೆ ನೀಡಿ, ಅವರು ಕೇಳುವ ದಾಖಲೆಗಳನ್ನು ಒದಗಿಸಿದರೆ ಬ್ಯಾಂಕಿನವರು ಗ್ರಾಹಕರ ಹಣವನ್ನು ಬಡ್ಡಿಸಮೇತ ರಿಸರ್ವ್ ಬ್ಯಾಂಕಿನಿಂದ ಹಿಂದಕ್ಕೆ ಪಡೆದು ನ್ಯಾಯಬದ್ಧ ವಾರಸುದಾರರಿಗೆ ಸಿಗುವಂತೆ ನೋಡಿ ಕೊಳ್ಳುತ್ತಾರೆ.
– ನಾರಾಯಣ ಶೆಟ್ಟಿಗಾರ ಬೆಂಗಳೂರು
Cell: 9845660131






