ಬೈಂದೂರಿನಲ್ಲಿ ಭೀಕರ ಅಪಘಾತ:ಸ್ಕೂಟಿ ಸವಾರ ಸಾವು
Views: 106
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜುಲೈ 23ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ, ಕಳವಾಡಿಯ 78 ವರ್ಷದ ಸುಧಾಕರ ಶೆಟ್ಟಿ ಅವರು ತಮ್ಮ ಸ್ಕೂಟಿಯಲ್ಲಿ ಒತ್ತಿನೆಣೆ ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿದ್ದರು. ಈ ವೇಳೆ ಯಡ್ತರೆ ಗ್ರಾಮದ ತಾಲೂಕು ಜಂಕ್ಷನ್ ಯು-ಟರ್ನ್ ಸಮೀಪ, ಅದೇ ಮಾರ್ಗದಲ್ಲಿ ಹಿಂದಿನಿಂದ ಬಂದ ಲಾರಿಯೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸುಧಾಕರ ಶೆಟ್ಟಿ ಅವರು ರಸ್ತೆಗೆ ಬಿದ್ದು ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮೊದಲು ಬೈಂದೂರು ಸರ್ಕಾರಿ ಆಸ್ಪತ್ರೆಗೆ, ಬಳಿಕ ಕುಂದಾಪುರ ಆದರ್ಶ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






