ರಾಜಕೀಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನ

Views: 192

ಬೆಂಗಳೂರು: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧನ ಭೀತಿಯಿಂದ ವಿದೇಶಕ್ಕೆ ಹಾರಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನದ ನಂತರ ದೇಶದಿಂದ ಪರಾರಿಯಾಗಿದ್ದ ಪ್ರಜ್ವಲ್, 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿದರು. ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದ ಎಸ್‌ಐಟಿ ಅಧಿಕಾರಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳ ಸಹಾಯದಿಂದ ಪ್ರಜ್ವಲ್‌ರೇವಣ್ಣ ಅವರನ್ನು ಬಂಧಿಸಿದರು.

ಹೊಳೆನರಸೀಪುರ ಟೌನ್ ಹಾಗೂ ಸಿಐಡಿ ಠಾಣೆಗಳಲ್ಲಿ ದಾಖಲಾಗಿರುವ ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್, ಬಂಧನ ಭೀತಿಯಲ್ಲಿ ತಲೆಮರೆಸಿ ಕೊಂಡಿದ್ದ. ಇವರ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಹಾಗೂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿತ್ತು.

ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ಇತ್ತೀಚೆಗೆ ವಿಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್, ‘ಮೇ 31ರಂದು ಶುಕ್ರವಾರ ಎಸ್‌ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿದ್ದರು.

ವಿಮಾನದಿಂದ ಇಳಿದ ಪ್ರಜ್ವಲ್ ರೇವಣ್ಣ, ಗೇಟ್‌ ಮೂಲಕ ನಿಲ್ದಾಣದೊಳಗೆ ಪ್ರವೇಶಿಸಿದರು. ಸ್ಥಳದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳು, ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ವಿಶೇಷ ಕೊಠಡಿಗೆ ಕರೆದೊಯ್ದು ಪರಿಶೀಲನೆ ನಡೆಸಿದರು.

ನಿಲ್ದಾಣದಲ್ಲಿ ಹಾಜರಿದ್ದ ಎಸ್‌ಐಟಿ ಹಿರಿಯ ಅಧಿಕಾರಿಗಳು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ನಿಲ್ದಾಣದಿಂದ ಹೊರಗೆ ಕರೆತಂದರು.

ಎಸ್ಐಟಿ ಕಚೇರಿಗೆ ಕರೆದೊಯ್ಯುವುದಕ್ಕೂ ಮುನ್ನ ಪ್ರಜ್ವಲ್ ಅವರನ್ನು ವಿಮಾನ ನಿಲ್ದಾಣ ಬಳಿಯ ಖಾಸಗಿ ಆಸ್ಪತ್ರೆಗೆ 1.25 ಗಂಟೆ ಸುಮಾರಿಗೆ ಕರೆದೊಯ್ಯಲಾಯಿತು. ಅಲ್ಲಿಯೇ ಪ್ರಜ್ವಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯರ ತಪಾಸಣೆ ಮುಕ್ತಾಯಗೊಂಡ ಬಳಿಕ ಪ್ರಜ್ವಲ್ ಅವರನ್ನು ವಿಶೇಷ ವಾಹನದಲ್ಲಿ ಎಸ್‌ಐಟಿ ಕಚೇರಿಯತ್ತ ಕರೆದೊಯ್ಯಲಾಯಿತು.ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಜೊತೆಗೆ, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ

 

 

Related Articles

Back to top button
error: Content is protected !!