ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಹಂಚಿಕೆ: ಭುಗಿಲೆದ್ದ ಅಸಮಾಧಾನ, ಬಂಡಾಯದ ಸ್ಪೋಟ, ಎರಡು ಪಕ್ಷಗಳಿಗೆ ದೊಡ್ಡ ಸವಾಲು..!

Views: 101
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೌಜನ್ಯಕ್ಕಾದರೂ ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದು ಎರಡು ಪಕ್ಷದವರು ಅಭಿಪ್ರಾಯ. ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲವೂ ಸರಿಯಿಲ್ಲ ಎನ್ನುವುದು ಕಂಡು ಬರುತ್ತಿದೆ. ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ಬಿಜೆಪಿಗೆ ಸ್ವಪಕ್ಷದೊಳಗಿನ ಬಂಡಾಯದ ಬಿಸಿಯ ಜೊತೆಗೆ ಮೈತ್ರಿ ಪಕ್ಷ ಜೆಡಿಎಸ್ನ್ನು ಸಮಾಧಾನಗೊಳಿಸುವ ಸವಾಲು ಎದುರಾಗಿದೆ.ಕೆಲವರು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸದೆ ಕಾದು ನೋಡುವ ತಂತ್ರದಲ್ಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಹಂಚಿಕೆ ಬಳಿಕ ಬಿಜೆಪಿಯೊಳಗೆ ಭಾರೀ ಬಂಡಾಯ ಭುಗಿಲೆದ್ದಿತ್ತು, ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕವೂ ಇದೇ ರೀತಿಯ ಅಸಮಾಧಾನದ ಜ್ವಾಲೆ ಭುಗಿಲೆದ್ದಿದ್ದು, ರಾಜ್ಯ ಬಿಜೆಪಿಗೆ ಬಂಡಾಯ ಶಮನ ದೊಡ್ಡ ಸವಾಲಾಗಿದೆ.
9 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಕೆಲ ಸಂಸದರು ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಪುತ್ರನಿಗೆ ಟಿಕೆಟ್ ಸಿಗದ ಹಿನ್ನೆಲೆ ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ವಿರುದ್ಧ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಸಿಟಿ ರವಿ, ರೇಣುಕಾಚಾರ್ಯ, ಸದಾನಂದ ಗೌಡ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದು, ಬಿಜೆಪಿಗೆ ಬಂಡಾಯ ಶಮನ ಸವಾಲಾಗಿದೆ.
21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸುವಾಗ ಸೌಜನ್ಯಕ್ಕಾದರೂ ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದು ರಾಜ್ಯದಲ್ಲಿ ಎನ್ಡಿಎ ಪಾಲುದಾರ ಜೆಡಿಎಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆದು 6 ತಿಂಗಳು ಕಳೆದರೂ ಈವರೆಗೆ ಸೀಟು ಹಂಚಿಕೆ ಅಂತಿಮಗೊಂಡಿಲ್ಲ.
ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವಾಗ ಜೆಡಿಎಸ್ ನಾಯಕರ ಜೊತೆಗೆ ಸಮಾಲೋಚನೆಯೇ ನಡೆಸಿಲ್ಲ ಎನ್ನಲಾಗಿದೆ. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಈ ಹಿಂದೆ ಸಹಮತ ವ್ಯಕ್ತಪಡಿಸಿದ್ದರು. ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಕ್ಕೆ ಕುಮಾರಸ್ವಾಮಿ ಪ್ರಸ್ತಾಪ ಮುಂದಿಟ್ಟಿದ್ದರು. ಇದೀಗ ಬೆಂಗಳೂರು ಗ್ರಾಮಾಂತರಕ್ಕೆ ದೇವೇಗೌಡರ ಕುಟುಂಬದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಾಗಿದೆ, ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯ ಸಂಸದರಿದ್ದು, ಆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ಒಲವು ಹೊಂದಿಲ್ಲ.
ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ತನ್ನ ಪುತ್ರನಿಗೆ ಟಿಕೆಟ್ ಕೊಡಿಸುವ ಆಲೋಚನೆ ಯಲ್ಲಿರುವಾಗ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕುಮಾರಸ್ವಾಮಿಗೆ ಶಾ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಒಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಗ್ಗಂಟಾಗಿ ಉಳಿದಿದೆ.
ಇನ್ನೊಂದು ಕಡೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡು ಪಕ್ಷಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಪ್ರೀತಂ ಗೌಡ, ಶರಣುಗೌಡ ಕುಂದಕೂರು, ಕರೆಮ್ಮ ನಾಯಕ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಸಂಘ ಪರಿವಾರದ ನಾಯಕರು, ಕೆಳ ಹಂತದ ಮುಖಂಡರು, ಕಾರ್ಯಕರ್ತರಿಗೆ ಈ ಮೈತ್ರಿ ಬಗ್ಗೆ ಒಮ್ಮತ ಇಲ್ಲ ಎನ್ನಲಾಗಿದೆ. ಮೇಲ್ಮಟ್ಟದಲ್ಲಿ ಏನೇ ಮೈತ್ರಿಯಾದರೂ ಕೆಳ ಹಂತದಲ್ಲಿ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳ ನಡುವೆ ಮೈತ್ರಿ ನಿರ್ಧಾರವಾಗಿದೆಯಾದರೂ ನಿರೀಕ್ಷಿತ ಚುನಾವಣಾ ಫಲಿತಾಂಶ ಕಷ್ಟ ಈ ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭ ಬಿಟ್ಟರೆ ಮೈತ್ರಿ ಪಕ್ಷಕ್ಕಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.






