ಪ್ರೀತಿಸಿ ಮದುವೆಯಾದ ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು!
Views: 29
ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಖ್ಯಾತಿಯ ನಟಿ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ? ಇಂತಹದೊಂದು ಪ್ರಶ್ನೆ ಈಗ ಗಾಂಧಿನಗರದಾದ್ಯಂತ ಜೋರಾಗಿ ಕೇಳಿಬರುತ್ತಿದೆ.
ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದ್ದು, ಈ ಕುರಿತು ನಟಿ ಶುಭಾ ಪೂಂಜಾ ಕೊನೆಗೂ ಮೌನ ಮುರಿದಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಶುಭಾ ಪೂಂಜಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು.. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ, ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಬಹುಕಾಲದ ಗೆಳೆಯ, ಉದ್ಯಮಿ ಸುಮಂತ್ ಬಿಲ್ಲವ ಅವರೊಂದಿಗೆ ಶುಭಾ ಪೂಂಜಾ ಜನವರಿ 5, 2022 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊರೊನಾ ಭೀತಿಯ ನಡುವೆಯೇ ಮಂಗಳೂರಿನಲ್ಲಿ ಅತ್ಯಂತ ಸರಳವಾಗಿ ಈ ಮದುವೆ ಸಮಾರಂಭ ನಡೆದಿತ್ತು.
ಯಾವಾಗಲೂ ಹಸನ್ಮುಖಿಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಪತಿಯೊಂದಿಗೆ ಫೋಟೋ ಹಂಚಿಕೊಳ್ಳುತ್ತಿದ್ದ ಶುಭಾ ಪೂಂಜಾ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ‘ಮೊಗ್ಗಿನ ಮನಸು’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ಶುಭಾ, ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಈ ಜೋಡಿ ವಿಚ್ಛೇದನದ ಹಾದಿ ಹಿಡಿದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಶುಭಾ ಪೂಂಜಾ ಅವರೇ ಈ ಬಗ್ಗೆ ಅಧಿಕೃತವಾಗಿ ಏನು ಹೇಳಲಿದ್ದಾರೆ ಎಂದು ಕಾಯಬೇಕಿದೆ.






