ಪ್ರೀತಿಗೆ ಬಿದ್ದ ಚೇತನ್ ಲಾವಣ್ಯಳ ಕೊಲೆಯಾದ ನಂತರ ತಂದಗೆ ಮೊದಲು ಕರೆ ಮಾಡಿ ಹೇಳಿದ್ದೇನು?
Views: 190
ಕನ್ನಡ ಕರಾವಳಿ ಸುದ್ದಿ: ಆರೋಪಿ ಚೇತನ್ ಕೃತ್ಯ ಎಸಗಿದ ನಂತರ, ಆತನೇ ತನ್ನ ತಂದೆಗೆ ಕರೆ ಮಾಡಿ ಹಲವು ವಿಷಯಗಳನ್ನು ಹೇಳಿಕೊಂಡಿದ್ದ ಎಂದು ಸ್ವತಃ ತಂದೆ ಪುರುಷೋತ್ತಮ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಬಿಸಿ ರೋಡ್‌ನಲ್ಲಾದ ಲಾವಣ್ಯ ಎಂಬ ಯುವತಿಯ ಹತ್ಯೆ ಪ್ರಕರಣ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರೀತಿಗೆ ಬಿದ್ದ ಚೇತನ್ ಎಂಬ ಯುವಕ ಲಾವಣ್ಯಳನ್ನು ಸಾರ್ವಜನಿಕ ಬಸ್ ನಿಲ್ದಾಣದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಂಗಳೂರು ಪೊಲೀಸರು ಆರೋಪಿ ಚೇತನ್ ಅನ್ನು ಪತ್ತೆ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ.
ಕೃತ್ಯ ಎಸಗಿ ತಂದೆಯ ಬಳಿ ಹೇಳಿದ್ದೇನು?
ಲಾವಣ್ಯಳನ್ನು ಕೊಲೆ ಮಾಡಿ ಆತ ಮೊದಲು ಕರೆ ಮಾಡಿದ್ದೇ ತನ್ನ ತಂದೆಗೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚೇತನ್ ತಂದೆಯೇ ಮಾಧ್ಯಮದ ಮುಂದೆ ಮಾತನಾಡಿದ್ದು, “ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾನೆ. ಬೇರೊಂದು ನಂಬರ್‌ನಿಂದ ಕರೆ ಮಾಡಿ ಏನೆಲ್ಲಾ ಆಗಿದೆ ಎಂಬುದನ್ನು ವಿವರಿಸಿದ್ದಾನೆ. ಅವಳನ್ನು ಒಪ್ಪಿಸಲು ಪ್ರಯತ್ನ ಪಟ್ಟಿದ್ದೇನೆ. ಆದರೂ ಅವರು ಒಪ್ಪಲಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ಅಂತಹ ತಪ್ಪು ಮಾಡಬೇಡ. ಮನೆ ಬಾ ಕುಳಿತುಕೊಂಡು ಮಾತನಾಡೋಣ ಎಂದು ನಾನು ಹೇಳಿದೆ.” ಎಂದರು.
ಇನ್ನು ಕರೆಯಲ್ಲಿ, “ನಾನೂ ಸಾಯೋದು, ಅವಳೂ ಸಾಯೋದು.. ನನಗೆ ಜೀವನವೇ ಬೇಡವೆಂಬಂತಾಗಿದೆ.. ಆದರೆ ಮರು ದಿನ ಬೆಳಿಗ್ಗೆ ಮತ್ತೆ ಕರೆ ಮಾಡಿ ನನಗೆ ಪಶ್ಚಾತಾಪ ಆಗುತ್ತಿದೆ. ಪಾಯಿಸನ್ ಕೂಡಾ ತೆಗೆದುಕೊಂಡಿದ್ದೇನೆ. ಹೊಟ್ಟೆನೋವು ಆಗುತ್ತಿದೆ ಅಂತಾನೂ ಹೇಳಿದ್ದ” ಎಂದು ಆರೋಪಿ ಚೇತನ್ ತಂದೆ ಹೇಳಿದರು.
ಲಾವಣ್ಯ ಕೊಂದ ಹಂತಕ ಲಾವಣ್ಯ ಮೂಲತಃ ದಕ್ಷಿಣ ಕನ್ನಡದ ಕಕ್ಕೆ ಪದವಿನ ನಿವಾಸಿ. ಆರೋಪಿ ಚೇತನ್ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದವನು. ಅವರಿಬ್ಬರೂ ಪರಸ್ಪರ ದೂರದ ಸಂಬಂಧಿಗಳು. ಆರಂಭದಲ್ಲಿ ಗೆಳೆತನದಲ್ಲಿದ್ದ ಇಬ್ಬರ ಮಧ್ಯೆ ಪರಸ್ಪರ ಪ್ರೀತಿ ಮೂಡಿತ್ತು. ಆದರೆ ಇಬ್ಬರ ನಡುವಿನ ಪ್ರೀತಿಗೆ ಬ್ರೇಕ್ ಬಿದ್ದು ಆಗಲೇ 4 ವರ್ಷಗಳಾಗಿತ್ತು. ಆತ ಮಾತ್ರ ಆಕೆಯನ್ನು ಬಿಟ್ಟಿರಲಿಲ್ಲ. ಬೆಂಬಿಡದ ಬೇತಾಳನಂತೆ ವರ್ಷಗಳಿಂದ ಏಕಪಕ್ಷೀಯವಾಗಿ ಲಾವಣ್ಯಳನ್ನು ಪ್ರೀತಿ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆದರೆ ಕೊಲೆಗೆ ಕಾರಣ ಪ್ರೀತಿ ನಿರಾಕರಣೆಯೇ? ಬೇರೆ ಏನಾದರು ಇದೆಯೇ? ಈ ಬಗ್ಗೆ ಮಾಹಿತಿ ಇನ್ನಷ್ಟು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಯಬೇಕಿದೆ.






