ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅಗಸ್ಟ್ 17ರಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

Views: 137
ಬೆಂಗಳೂರು: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅಂತರ ವಿಭಾಗ ಮಟ್ಟದ ಕೋರಿಕೆ, ಪರಸ್ಪರ ವರ್ಗಾವಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ್ದು, ಆಗಸ್ಟ್ 17ರಿಂದ ಪ್ರಕ್ರಿಯೆ ಆರಂಭವಾಗಲಿದೆ. ಆ. 17, 19, 20 ಮತ್ತು 27 ರಂದು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ವರ್ಗಾವಣೆಗೆ ಈಗಾಗಲೇ ಪ್ರಕಟಿಸಿರುವ ಆದ್ಯತಾ ಪಟ್ಟಿಗೆ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ತಾವು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು.
ಆ.17ರಂದು ಎಲ್ಲಾ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ 1ರಿಂದ 300 ರವರೆಗೆ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಆಗಸ್ಟ್ 19 ರಂದು 301 ರಿಂದ 800 ರವರೆಗಿನ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸಲಾಗುವುದು, ಆ.20ರಂದು 801 ರಿಂದ ಕ್ರಮಾಂಕ ಮುಕ್ತಾಯವಾಗುವವರೆಗೆ ಕೌನ್ಸೆಲಿಂಗ್ ನಡೆಯಲಿದೆ. ಅದೇ ರೀತಿ ಆ.17ರಿಂದ ಪರಸ್ಪರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.