ಪಾನಿಪುರಿ, ಮಸಾಲಪುರಿಗೆ ಬಳಸುವ ಕೃತಕ ಬಣ್ಣ ಬಳಕೆ ನಿಷೇಧ ಸಾಧ್ಯತೆ?

Views: 39
ರಾಜ್ಯದಲ್ಲಿ ಮಾರಾಟವಾಗುವ ಪಾನಿಪುರಿ ಮಾದರಿಗಳಲ್ಲಿ ಶೇ.22ರಷ್ಟು ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕರ್ನಾಟಕ ತಿಳಿಸಿದೆ.
ರಾಜ್ಯಾದ್ಯಂತ ಸಂಗ್ರಹಿಸಲಾದ ಪಾನಿಪುರಿಯ 260 ಮಾದರಿಗಳ ಪೈಕಿ 41ರಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವುದರಿಂದ ಅಸುರಕ್ಷಿತ ಎಂದು ಹೇಳಲಾಗಿದೆ. ಇನ್ನೂ 18 ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಪರಿಗಣಿಸಲಾಗಿದೆ.
“ಸಾಮಾನ್ಯ ಹೊಟ್ಟೆ ನೋವಿನಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ, ಪಾನಿಪುರಿಗಳಲ್ಲಿನ ಕೃತಕ ಬಣ್ಣಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಕೆಲವು ಸ್ವಯಂ ನಿರೋಧಕ ಕಾಯಿಲೆಗಳು ಅಥವಾ ಮೂತ್ರಪಿಂಡದ ಹಾನಿಯನ್ನು ಸಹ ಉಂಟು ಮಾಡಬಹುದು. ಪಾನಿಪುರಿ ಅತ್ಯಗತ್ಯವಲ್ಲದ ಕಾರಣ ಅವುಗಳ ಬಳಕೆ ಕಡಿಮೆ ಮಾಡುವುದು ಸೂಕ್ತ” ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಹೇಳಿದ್ದಾರೆ.
“ಪಾನಿಪುರಿ ಹಾಗೂ ಮಸಾಲಪುರಿ ಬಗ್ಗೆ ಸಾಕಷ್ಟು ದೂರು ಬಂದಿದ್ದರಿಂದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗಿದೆ. 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಪಾನಿಪುರಿ ಹಾಗೂ ಮಸಾಲಪುರಿಗೆ ಬಳಸುವ ರಾಸಾಯನಿಕಗಳನ್ನು ನಿಷೇಧಿಸುವ ಸಾಧ್ಯತೆಯಿದೆ” ಎಂದು ಕೆ. ಶ್ರೀನಿವಾಸ್ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.