ಪಂಚಾಯತ್ ಚುನಾವಣೆಗೆ ಬ್ಯಾಲೆಟ್ ಪೇಪರ್ : ಸಚಿವ ಸಂಪುಟ ನಿರ್ಧಾರ, ಚುನಾವಣೆ ಯಾವಾಗ?
Views: 51
ಕನ್ನಡ ಕರಾವಳಿ ಸುದ್ದಿ: ಗ್ರಾಮ ಪಂಚಾಯತ್ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ನಡೆಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳ ಮಾದರಿಯಲ್ಲೇ ಗ್ರಾಮ ಪಂಚಾಯತ್, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಎಲೆಕ್ಟ್ರಾನಿಕ್ ಮತಯಂತ್ರ(EVM) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆ-2026’ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಏಪ್ರಿಲ್-ಮೇನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ?
ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ 2026ರ ಏಪ್ರಿಲ್- ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರಕಾರ ಸಜ್ಜಾಗಿದ್ದು, ಪೂರ್ವಸಿದ್ಧತೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ನಿಗದಿತ ಕಾಲಮಿತಿಯಲ್ಲಿ ಮೀಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.
ರಾಜ್ಯದ 5,948 ಗ್ರಾಪಂಗಳ ಪೈಕಿ 5,698 ಗ್ರಾಪಂಗಳಿಗೆ 2020 ಡಿಸೆಂಬರ್‌ನಲ್ಲಿ ಚುನಾವಣೆ ಆಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 2021- 22ರಲ್ಲಿ ನಡೆದಿದ್ದರಿಂದ 2026ರ ಫೆಬ್ರವರಿ ಎರಡನೇ ವಾರಕ್ಕೆ ಈ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿದೆ. ಇದರೊಟ್ಟಿಗೆ 2026ರ ಮಾರ್ಚ್ ಗೆ ಮುಗಿಯುವ 92 ಗ್ರಾಪಂಗಳನ್ನು ಸೇರಿಸಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸಿದೆ. ಈಗಾಗಲೇ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್ ಅವಧಿ ಮುಗಿದಿದೆ. 2021ರಿಂದಲೇ ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 240 ತಾಲೂಕು ಪಂಾಯಿತಿಗಳಿಗೆ ಎಲೆಕ್ಷನ್ ನಡೆದಿರುವುದರಿಂದ ಚುನಾಯಿತ ಪ್ರತಿನಿಧಿಗಳಿಲ್ಲ. ಹೀಗಾಗಿ ಏಪ್ರಿಲ್, ಮೇನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ.






