ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕೆ 5 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಂದೆ!

Views: 87
ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದಲ್ಲೊಂದು ಅಮಾನುಷ ಘಟನೆ ನಡೆದಿದ್ದು, ಸೀತಾಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದ್ದು, ತನ್ನ ಮಗಳು ತಾನಿ ನೆರೆಹೊರೆಯವರೊಂದಿಗೆ ಮಾತನಾಡಿದ್ದರಿಂದ ಆತ ಕೋಪಗೊಂಡಿದ್ದ ಎನ್ನಲಾಗಿದೆ. ಫೆಬ್ರವರಿ 25 ರ ಸಂಜೆ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಆಕೆ ಕಣ್ಮರೆಯಾದ ಒಂದು ದಿನದ ನಂತರ, ಆಕೆಯ ಕತ್ತರಿಸಿದ ಕಾಲು ಹೊಲದಲ್ಲಿ ಪತ್ತೆಯಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಪ್ರಾರಂಭದಲ್ಲಿ ಇದನ್ನು ಕಾಡು ಪ್ರಾಣಿಯ ದಾಳಿ ಎಂದು ಶಂಕಿಸಲಾಗಿದೆ ಎಂದು ಸೀತಾಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ. ಮಗುವಿನ ಕುಟುಂಬವು ತನಿಖೆ ನಡೆಸಬೇಕೆಂದು ಒತ್ತಾಯಿಸಿದ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಫೆಬ್ರವರಿ 27 ರಂದು, ಡ್ರೋನ್ ಕಣ್ಗಾವಲಿನ ಸಹಾಯದಿಂದ, ಪೊಲೀಸ್ ಅಧಿಕಾರಿಗಳು ಮತ್ತೊಂದು ಕತ್ತರಿಸಿದ ದೇಹದ ಭಾಗವನ್ನು ಪತ್ತೆ ಮಾಡಿದ್ದಾರೆ. ದೇಹದ ಭಾಗಗಳ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಕೊಲೆಯಾದ ನಂತರ ಮಗುವಿನ ತಂದೆ ನಾಪತ್ತೆಯಾಗಿದ್ದ.
ತನ್ನ ಫೋನ್ ಅನ್ನು ಹೆಂಡತಿಗೆ ಕೊಟ್ಟು ನಾಪತ್ತೆಯಾಗಿದ್ದ. ಮಗು ಕಾಣೆಯಾಗುವ ಮೊದಲು ನಡೆದ ಘಟನೆಗಳ ಬಗ್ಗೆ ನಾವು ಕುಟುಂಬ ಸದಸ್ಯರನ್ನು ಪ್ರಶ್ನಿಸಿದ್ದೆವು. ಆರೋಪಿಯು ಬೇರೆಡೆ ಇದ್ದುಕೊಂಡು ಎಲ್ಲರ ಬಳಿ ತನಿಖೆಯ ಬಗ್ಗೆ ವಿಚಾರಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಆರೋಪಿ ಮೋಹಿತ್ ಕುಟುಂಬ ಹಾಗೂ ನೆರೆಹೊರೆಯವರಾದ ರಾಮು ಎಂಬುವವರ ಜೊತೆ ಮೊದಲು ತುಂಬಾ ಆತ್ಮೀಯರಾಗಿದ್ದರು ಮತ್ತು ಆಗಾಗ್ಗೆ ಪರಸ್ಪರ ಭೇಟಿ ನೀಡುತ್ತಿದ್ದರು. ಕೆಲವು ದಿನಗಳ ಹಿಂದೆ, ಎರಡು ಕುಟುಂಬಗಳ ನಡುವೆ ಜಗಳವಾಯಿತು ಮತ್ತು ಅವರು ಪರಸ್ಪರ ಭೇಟಿ ನೀಡುವುದನ್ನು ನಿಲ್ಲಿಸಿದರು. ಮೋಹಿತ್ ತನ್ನ ಮಗಳಿಗೆ ರಾಮುವಿನ ಮನೆಗೆ ಹೋಗುವುದನ್ನು ನಿಲ್ಲಿಸುವಂತೆ ಪದೇ ಪದೇ ಹೇಳುತ್ತಿದ್ದನು, ಆದರೆ ಅವಳು ಇನ್ನೂ ಅಲ್ಲಿಗೆ ಹೋಗಿ ಆಟವಾಡುತ್ತಿದ್ದಳು. ಘಟನೆಯ ದಿನ, ಮೋಹಿತ್ ತನ್ನ ಮಗಳು ರಾಮು ಇರುವ ಮನೆಯಿಂದ ಬರುತ್ತಿರುವುದನ್ನು ನೋಡಿದ್ದಾನೆ. ನಂತರ ಕೋಪಗೊಂಡು ,ಮಗುವನ್ನು ತನ್ನ ಬೈಕ್ ಮೇಲೆ ಕೂರಿಸಿ, ನಿರ್ಜನ ಸ್ಥಳಕ್ಕೆ ಕರೆದೊಯ್ದು, ಬಟ್ಟೆಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.