ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ದರೋಡೆಗೆ ಯತ್ನ: ಅರ್ಚಕ ದಂಪತಿ ವಶಕ್ಕೆ
Views: 120
ಕನ್ನಡ ಕರಾವಳಿ ಸುದ್ದಿ: ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಅರ್ಚಕ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪುತ್ತೂರಿನ ಮುಡೂರು ನಿವಾಸಿ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಎಂದು ಗುರುತಿಸಲಾಗಿದೆ. ಆರೋಪಿ ಕಾರ್ತಿಕ್ ರಾವ್ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಏನಿದು ಘಟನೆ?
ಪುತ್ತೂರು ಕಸಬಾ ನಿವಾಸಿ, ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ (84) ಎಂಬವರ ಮನೆಗೆ ಡಿಸೆಂಬರ್ 17ರ ಮಧ್ಯರಾತ್ರಿ ಹೆಲ್ಮಟ್ ಧರಿಸಿದ್ದ ಇಬ್ಬರು ಅಪರಿಚಿತರು ಹಿಂಬಾಗಿಲಿನಿಂದ ಪ್ರವೇಶಿಸಿದ್ದರು. ಮುಖ ಮರೆಮಾಚಿದ್ದ ಆರೋಪಿಗಳು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಲು ಯತ್ನಿಸಿ, ದಂಪತಿಯನ್ನು ಬೆದರಿಸಿದ್ದರು.
ಈ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯಗಳಾಗಿದ್ದು, ಪಿರ್ಯಾದಿದಾರರು ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದವರು ಜಾಗೃತರಾಗುವ ಭೀತಿಯಿಂದ ಆರೋಪಿಗಳು ಯಾವುದೇ ಸೊತ್ತುಗಳನ್ನು ಕದಿಯಲಾಗದೆ ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೋಟಾರು ಸೈಕಲ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.






