ಯುವಜನ

ನಮ್ಮ ಧ್ವನಿ ಹತ್ತಿಕ್ಕುವ ಕೆಲಸ ಮತ್ತು ಸರ್ವಾಧಿಕಾರ ನಡೆಯಲು ನಾವು ಬಿಡಲ್ಲ: ಸಂಸತ್ ಬಳಿ ಬಂಧಿತ ಯುವತಿ ಹೇಳಿಕೆ

Views: 0

“ನಾವು ನಿರುದ್ಯೋಗಿಗಳು. ಸರ್ಕಾರ ನಮ್ಮ ಅಳಲು ಕೇಳುತ್ತಿಲ್ಲ. ಅದಕ್ಕಾಗಿ ಹೀಗೆ ಮಾಡಿದೆವು” ಎಂದು ಸಂಸತ್‌ ಬಳಿ ಪ್ರತಿಭಟಿಸಿ ಬಂಧಿತರಾದ ಯುವತಿ ನೀಲಂ ಹೇಳಿದ್ದಾರೆ.

ಸಂಸತ್ ಭವನದ ಹೊರಗಡೆ ಹಳದಿ ಬಣ್ಣದ ಹೊಗೆ ಸಿಂಪಡಣೆ ಮಾಡಿ ಘೋಷಣೆ ಕೂಗಿದ ಆರೋಪದ ಮೇಲೆ ಹರಿಯಾಣ ಹಿಸ್ಸಾರ್ ಮೂಲದ ನೀಲಂ (42) ಅವರನ್ನು ಬಂಧಿಸಲಾಗಿದೆ.

ಇಂದು (ಡಿ.13) ಲೋಕಸಭೆ ಕಲಾಪದ ವೇಳೆ ಸಂಸತ್‌ ಒಳ ನುಗ್ಗಿ ಕೆಮಿಕಲ್ ಸಿಂಪಡಣೆ ಮಾಡಿದ ಇಬ್ಬರು ಯುವಕರು ಮತ್ತು ಸಂಸತ್ ಹೊರಗಡೆ ಪ್ರತಿಭಟಿಸಿದ ಓರ್ವ ಯುವಕ ಮತ್ತು ಯುವತಿ ಸೇರಿ ಒಟ್ಟು ನಾಲ್ವರ ಬಂಧನವಾಗಿದೆ.

ಈ ಪೈಕಿ ಮೂವರು ಮಾಧ್ಯಮಗಳ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಪೊಲೀಸರು ಬಂಧಿಸಿ ಕರೆದೊಯ್ಯುವಾಗ ಮಾತನಾಡಿದ ಯುವತಿ ನೀಲಂ, “ನಾವು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ. ನಾವು ವಿದ್ಯಾರ್ಥಿಗಳು, ಸಾಮಾನ್ಯ ಜನರು. ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಸರ್ಕಾರವು ರೈತರು, ಬಡವರ ಮಾತನ್ನು ಕೇಳುತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ನಡೆಯಲು ನಾವು ಬಿಡಲ್ಲ. ಸರ್ವಾಧಿಕಾರಿ ಆಡಳಿತ ನಿಲ್ಲಿಸಿ. ಭಾರತ್ ಮಾತಾ ಕೀ ಜೈ,”ಎಂದು ನೀಲಂ ಹೇಳಿದ್ದಾರೆ.

ನಾಲ್ವರ ಬಂಧನ:

ಲೋಕಸಭೆಯ ಒಳಗೆ ಕೆಮಿಕಲ್ ಹೊಗೆ ಸಿಂಪಡಣೆ ಮಾಡಿದ ಇಬ್ಬರನ್ನು ಮನೋರಂಜನ್ ಮತ್ತು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಮೈಸೂರು ಮೂಲದವರು. ಇವರಿಗೆ ಕೊಡಗು-ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಂಸತ್ ಕಲಾಪ ಸಂದರ್ಶಕರ ಪಾಸ್ ನೀಡಿದ್ದರು ಎಂದು ತಿಳಿದು ಬಂದಿದೆ.

ಸಂಸತ್ ಹೊರಗಡೆ ಪ್ರತಿಭಟಿಸಿದ ಇಬ್ಬರಲ್ಲಿ ಯುವತಿ ನೀಲಂ ಹರಿಯಾಣದ ಹಿಸ್ಸಾರ್ ಮೂಲದವರು ಮತ್ತು ಯುವಕ ಮಹರಾಷ್ಟ್ರದ ಲಾತೂರ್ ಮೂಲದವರು ಎಂಬ ಮಾಹಿತಿ ದೊರೆತಿದೆ.

Related Articles

Back to top button
error: Content is protected !!