ರಾಜಕೀಯ

ಧಾರವಾಡ ಕ್ಷೇತ್ರದಿಂದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ

Views: 53

ಬೆಂಗಳೂರು, ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗದಗ ಜಿಲ್ಲೆ ಶಿರಹಟ್ಟಿ ಹಾಗೂ ಬಾಡೆಹೊಸೂರು ಭಾವೈಕ್ಯತಾ ಸಂಸ್ಥಾನ ಮಠದ ಅಧಿಪತಿಗಳಾದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರಕಟಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಭವನದಲ್ಲಿಂದು ವಿವಿಧ ಮಠಾಧೀಶರುಗಳ ಜತೆ ಚಿಂತನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ, ಧಾರವಾಡ ಮತ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಾಡಿನ ಬಹುಸಂಖ್ಯಾತ ಮಠಾಧಿಪತಿಗಳು, ಭಕ್ತರು, ಸಾಹಿತಿಗಳು, ಕಲಾವಿದರು, ರೈತರು, ವ್ಯಾಪಾರಿಗಳು, ನೌಕರರು ಹಾಗೂ ಸರ್ವ ಸಮಾಜದ ಮುಖಂಡರು ಬಯಸಿದ್ದು, ಇವರೆಲ್ಲರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು.

ಇಂದು ನಡೆದ ವಿವಿಧ ಮಠಾಧೀಶರ ಚಿಂತನಾ ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಲಿಂಗಾಯತ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ದೂರಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡುತ್ತಿದ್ದಾರೆ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ದ ಸ್ವಾಭಿಮಾನಿಗಳು ಸಾರಿದ ಧರ್ಮ ಯುದ್ಧ ಇದಾಗಿದೆ. ರಾಜಕೀಯ ಪ್ರಜ್ಞೆಯನ್ನು ಮೂಡಿಸಲಿಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನ ಬಯಸಿದ್ದಾರೆ. ನೊಂದ ಸಮಾಜಗಳು, ನಾಯಕರುಗಳು ನಮ್ಮ ಮುಂದೆ ಬಂದು ನೋವು ತೋಡಿಕೊಂಡ ಕಾರಣ ಚುನಾವಣಾ ಹೋರಾಟಕ್ಕೆ ಇಳಿದಿದ್ದೇನೆ ಎಂದು ಅವರು ಹೇಳಿದರು.

ಕೇಂದ್ರ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರನ್ನು ಸಮಗ್ರವಾಗಿ ಸೇರಿಸದೆ ಕೆಲವರನ್ನು ಸೇರಿಸಿ ಕೆಲವರನ್ನು ಬಿಟ್ಟಿರುವುದು ಸಮಾಜದ ಅವನತಿಗೆ ಕಾರಣವಾಗಿದೆ. ವೀರಶೈವ ಲಿಂಗಾಯತರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಅಲಕ್ಷ್ಯ ಮಾಡಿವೆ. ಇವರಿಗೆ ವೀರಶೈವ ಲಿಂಗಾಯತ ಮತ್ತು ಇತರ ಸಮಾಜಗಳ ಮತ ಬೇಕು. ಆದರೆ ಅಧಿಕಾರ ಮಾತ್ರ ಕೊಡಲ್ಲ. ಕುರುಬರು, ರೆಡ್ಡಿ, ಜಂಗಮ ಹೀಗೆ ಬಹಳಷ್ಟು ಸಮಾಜಗಳನ್ನು ಎರಡೂ ಪಕ್ಷಗಳು ಅಲಕ್ಷ್ಯ ಮಾಡಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 9 ಮಂದಿ ವೀರಶೈವ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರೂ ಒಬ್ಬರಿಗೂ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಕೊಡದೆ ಅನ್ಯಾಯ ಮಾಡಲಾಗಿದೆ. ಕೇವಲ ರಾಜ್ಯ ಖಾತೆಯನ್ನು ಕೊಟ್ಟಿರುವುದು ಸರಿಯಲ್ಲ. ಈ ಬಗ್ಗೆ ಸಮುದಾಯದ ಜನ ಬೇಸರಗೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರುಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!