ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ರೇಣುಕಾಚಾರ್ಯಗೆ ಕೈ ಟಿಕೆಟ್?

Views: 0
ರಾಜ್ಯದಲ್ಲಿ ಆಪರೇಷನ್ ಹಸ್ತದ ಕೂಗು ಜೋರಾಗಿರುವ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರಮಾಪ್ತ ಎಂ.ಪಿ ರೇಣುಕಾಚಾರ್ಯ ಅವರು ರಾಜ್ಯ ಬಿಜೆಪಿಯ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟರೆ? ಎನ್ನುವ ಪ್ರಶ್ನೆಗಳು ಶುರುವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ರೇಣುಕಾಚಾರ್ಯಗೆ ಲೋಕಸಭಾ ಟಿಕೆಟ್ ಗೆ ಆಕಾಂಕ್ಷಿಯಾಗಿದ್ದಾರೆ.
ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿ ಯಾಗುವ ಲೆಕ್ಕಾಚಾರದಲ್ಲಿ ಪಕ್ಷದಲ್ಲಿ ಟಿಕೆಟ್ ಸಿಗುವುದು ಕಷ್ಟ ಎನ್ನುವ ವಿಚಾರ ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ರೇಣುಕಾಚಾರ್ಯ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಶುಕ್ರವಾರ ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.
ಈ ವೇಳೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇಬ್ಬರೂ ನಾಯಕರೊಂದಿಗೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ, ಆದರೆ ಶಾಮನೂರು ಶಿವಶಂಕರಪ್ಪ ಅವರು ನೀಡುವ ಒಪ್ಪಿಗೆ ಅಗತ್ಯ ಆದ್ದರಿಂದ ಒಂದು ವೇಳೆ ಪಕ್ಷಕ್ಕೆ ಬರುವುದಿದ್ದರೆ ಶಾಮನೂರು ಒಪ್ಪಿಗೆ ಪಡೆಯಿರಿ ಎನ್ನುವ ಮಾತನ್ನು ರೇಣುಕಾಚಾರ್ಯಗೆ ಡಿಕೆಶಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದೊಂದು ಔಪಚಾರಿಕ ಭೇಟಿ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ದಾವಣಗೆರೆ ಲೋಕಸಭಾ ಟಿಕೆಟ್ ನೀಡುವುದಾದರೆ ಪಕ್ಷಕ್ಕೆ ಬರುವ ಮಾತುಗಳನ್ನು ರೇಣುಕಾಚಾರ್ಯ ಮಾತನಾಡಿದ್ದಾರೆ.








