ತಾತನ ಆಸ್ತಿಯಲ್ಲಿ ಮೊಮ್ಮಕ್ಕಳು ಪಾಲು ಕೇಳಲು ಅವಕಾಶವಿಲ್ಲ: ಹೈಕೋರ್ಟ್
Views: 26
ಕನ್ನಡ ಕರಾವಳಿ ಸುದ್ದಿ: ತಾತನು ತನ್ನ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯು ವಿಭಜನೆಯ ನಂತರ ಅಪ್ಪನ ಕೈಸೇರಿದಾಗ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ವಿನಃ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಈ ರೀತಿ ವಿಭಜನೆಯಾದ ಆಸ್ತಿಯಲ್ಲಿ ಮೊಮ್ಮಗಳು ಪಾಲು ಕೇಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್ ಸ್ವಾಮಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ. ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ. ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರಾದ ಉಷಾ ಅವರು ಉಲ್ಲೇಖಿಸಿರುವ ಆಸ್ತಿಗಳನ್ನು ಆಕೆಯ ತಾತ, ಅಂದರೆ ತಂದೆಯ ತಂದೆ ಸ್ವಂತವಾಗಿ ಸಂಪಾದಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಲಿದೆ. ಈ ಆಸ್ತಿಯನ್ನು ಅವರ ತಾತ, ಅವರ ಮಕ್ಕಳಿಗೆ ಕೌಟುಂಬಿಕ ಒಪ್ಪಂದದ ಮೂಲಕ ಆಸ್ತಿ ಹಂಚಿಕೆ ಮಾಡಿದ್ದಾರೆ. ತಾತನ ಸ್ವಯಾರ್ಜಿತ ಆಸ್ತಿ ಭಾಗವಾಗಿ ತಂದೆಗೆ ಬಂದಾಗ, ಅದು ಆ ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಆದರೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ತಿಳಿಸಿದೆ.
ಮಿತಾಕ್ಷರ ಕಾನೂನಿನ ಪ್ರಕಾರ, ತಂದೆಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕಿರುತ್ತದೆ. ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರರು ಸಾಕ್ಷ್ಯಗಳನ್ನು ಒದಗಿಸಿಲ್ಲ. ಆದ್ದರಿಂದ ಅರ್ಜಿದಾರರಿಗೆ ಈ ಆಸ್ತಿಗಳಲ್ಲಿ ಯಾವುದೇ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಅರ್ಜಿದಾರರು ಪಿತ್ರಾರ್ಜಿತ ಆಸ್ತಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ವಿಫಲಳಾಗಿದ್ದಾರೆ. ಆದ್ದರಿಂದ ಈ ಆಸ್ತಿಯಲ್ಲಿನ ಹಕ್ಕುಗಳಲ್ಲಿ ಭಾಗ ಪಡೆಯಲು ಅರ್ಹಳಾಗುವುದಿಲ್ಲ. ತಾತನ ಸ್ವಯಂ ಸಂಪಾದಿತ ಆಸ್ತಿಗಳನ್ನು ಜಂಟಿ ಕುಟುಂಬದ ಆಸ್ತಿಗಳೆಂದು ಹೇಳಿ, ತಾನು ಭಾಗ ಪಡೆಯಬಹುದು ಎಂದು ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.






