ಡೆಂಘೀ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ ಸಂಸದ ಡಾ.ಸಿ.ಎನ್ ಮಂಜುನಾಥ್

Views: 85
ಬೆಂಗಳೂರು: ರಾಜ್ಯದಲ್ಲಿ ಡೆಂಘೀ ದಿನಕಳೆದಂತೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಡೆಂಘೀಗೆ ತುತ್ತಾದವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಅವರು ಡೆಂಗ್ಯೂ ಜ್ವರದ ನಿಯಂತ್ರಣ ಅಂದ್ರೆ ಸೊಳ್ಳೆಯ ನಿಯಂತ್ರಣ. ಸೊಳ್ಳೆ ನಿಯಂತ್ರಣವಾದರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲದ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಇದು. ಡೆಂಗ್ಯೂ ತಡೆಗಟ್ಟದಿದ್ದರೆ ಚಿಕನ್ ಗುನ್ಯಾ, ಝಿಕಾ ವೈರಸ್ ಬರಬಹುದು ಎಂದು ಎಚ್ಚರಿಸಿದ್ದಾರೆ.
ಡೆಂಗ್ಯೂ ರಾಜ್ಯಾದ್ಯಂತ ಹರಡುವುದರಿಂದ ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿದೆ. ಇದಕ್ಕಾಗಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ನಿಯಂತ್ರಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ಹಣ ವಸೂಲಿ ಮಾಡಿದರೆ ಅವುಗಳ ಬಾಗಿಲು ಮುಚ್ಚಿಸಬೇಕು.
ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದು, ಈಗ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ. ಡೆಂಗ್ಯೂ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ರೆ ಕ್ರಮ ತೆಗೆದುಕೊಳ್ಳಬೇಕು.
ಡೆಂಗ್ಯೂ ಫೀವರ್‌ಗೆ ಅಡ್ಮಿಟ್ ಆದವರಿಗೆ ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತು. ಅದೇ ರೀತಿ ಡೆಂಗ್ಯೂ ಬಂದವರಿಗೂ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಫಲೆಂಟ್ಸ್ ಅಂತ ಸ್ಟಿಕರ್ ಬರಲಿದೆ. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿಯೋದ್ರಿಂದ ತಪ್ಪಿಸಬಹುದು.
ಡೆಂಗ್ಯೂ ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದು. ರಾಜ್ಯದ ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಸ್ ಈಜಿಪ್ಟೆ ಸೊಳ್ಳೆಯಿಂದ ಈ ಕಾಯಿಲೆ ಹರಡುತ್ತಿದೆ. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಡೆಂಗ್ಯೂಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಮಂಜುನಾಥ್ ಅವರು ಹೇಳಿದ್ದಾರೆ.