ರಾಜಕೀಯ

ಡಿಸಿಎಂ ಹೊರಗಿಟ್ಟು ಪರಂ ನಿವಾಸದಲ್ಲಿ ಆಪ್ತರ ಜೊತೆ ಸಿಎಂ ಡಿನ್ನರ್ ಮೀಟಿಂಗ್ 

Views: 0

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಲ ಸಚಿವರ ಭೋಜನ ಕೂಟದ ಸಭೆ ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಿಟ್ಟು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಾ.ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಇವರುಗಳು ಮಾತ್ರ ಭೋಜನ ಕೂಟದ ನೆಪದಲ್ಲಿ ಸಭೆ ಸೇರಿ ಚರ್ಚೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಬಿಜೆಪಿ, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿರುವಾಗಲೇ ಕಾಂಗ್ರೆಸ್‌ನ ಕೆಲ ಶಾಸಕರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರ ತೀರ್ಮಾನ ಆಗಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೆ ಈ ಭೋಜನ ಕೂಟದ ಸಭೆ ನಡೆದಿರುವುದು ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದೆ.

ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್ ಇವರುಗಳು ಉಪಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿದ್ದರು. ಈ ನಡುವೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಮಾತುಗಳು ಹರಿದಾಡುತ್ತಿರುವುದು ಕಾಂಗ್ರೆಸ್‌ನಲ್ಲಿ ಏನೋ ನಡೆಯುತ್ತಿದೆ ಎಂಬ ಗುಮಾನಿಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್‌ನ ಗೊಂದಲಗಳಿಗೆ ತೆರೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರುಗಳು ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಡಾ. ಜಿ. ಪರಮೇಶ್ವರ್ ಊಟಕ್ಕೆ ಕರೆದಿದ್ದರು ಹೋಗಿದ್ದೇವು. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಡಾ.ಜಿ. ಪರಮೇಶ್ವರ್ ಸಹ, ಸಿದ್ಧರಾಮಯ್ಯ ಹಾಗೂ ಕೆಲ ಸಚಿವರನ್ನು ಊಟಕ್ಕೆ ಕರೆದಿದ್ದೆ. ಇಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸಚಿವ ಸತೀಶ್ ಜಾರಕಿಹೊಳಿ, ಊಟ ಮಾಡುತ್ತಾ ರಾಜಕೀಯ ಚರ್ಚೆ ಮಾಡಿದ್ದೇವೆ. ಅಂತಹ ಗಂಭೀರ ಚರ್ಚೆಗಳೇನು ಆಗಿಲ್ಲ. ರಾಜಕೀಯ ನಾಯಕರು ಸೇರಿದ ಮೇಲೆ ರಾಜಕಾರಣದ ಚರ್ಚೆ ಮಾಡಲು ಸಾಧ್ಯವೆ ಎಂದು ಹೇಳಿ, ಈ ಭೋಜನ ಕೂಟದ ಸಭೆಗೆ ನಾನಾ ವ್ಯಾಖ್ಯಾನಗಳು ಸರಿಯಲ್ಲ ಎಂದು ಹೇಳಿದರು.

ಭೋಜನ ಕೂಟದ ಸಭೆ ರಾಜಕೀಯ ಸಭೆ ಅಲ್ಲ ಎಂದು ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳು ಸ್ಪಷ್ಟನೆ ನೀಡಿದ್ದರೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಿಟ್ಟು ಸಭೆ ನಡೆಸಿರುವುದು ನಾನಾ ರಾಜಕೀಯ ಗುಮಾನಿಗಳಿಗೆ ಕಾರಣವಾಗಿದೆ.

Related Articles

Back to top button
error: Content is protected !!