ಟೆಸ್ಟ್ ತಂಡದಿಂದ ಸ್ಥಾನ ಪಡೆಯುವಲ್ಲಿ ವಿಫಲರಾದ ಮೊಹಮ್ಮದ್ ಶಮಿಗೆ ಮತ್ತೊಂದು ಸಂಕಷ್ಟ! ವಿಚ್ಛೇದಿತ ಪತ್ನಿಯಿಂದ ತಿಂಗಳಿಗೆ 10 ಲಕ್ಷ ರೂ. ಬೇಡಿಕೆ !
Views: 41
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ತಂಡದಿಂದ ಸ್ಥಾನ ಪಡೆಯುವಲ್ಲಿ ವಿಫಲರಾಗಿ ಬೇಸರದಲ್ಲಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿಗೆ ಇದೀಗ ತಮ್ಮ ಪತ್ನಿಯ ಕಡೆಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.
ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಮೊಹಮ್ಮದ್ ಶಮಿಗೆ ನೋಟಿಸ್ ಜಾರಿ ಮಾಡಿದೆ. ಹಸಿನ್ ಜಹಾನ್ ತನಗೆ ಮತ್ತು ತಮ್ಮ ಅಪ್ರಾಪ್ತ ಮಗಳಿಗೆ ಜೀವನಾಂಶ ಹೆಚ್ಚಿಸುವಂತೆ ಕೋರಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನ ಎರಡು ತೀರ್ಪುಗಳನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿರುವ ಅರ್ಜಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಶಮಿಗೆ ಸೂಚಿಸಿದೆ.
ಕಲ್ಕತ್ತಾ ಹೈಕೋರ್ಟ್ ಈ ಹಿಂದೆ ಹಸಿನ್ ಜಹಾನ್‌ಗೆ 1.5 ಲಕ್ಷ ರು ಮತ್ತು ಆಕೆಯ ಮಗಳಿಗೆ 2.5 ಲಕ್ಷ ರು ಮಾಸಿಕ ಜೀವನಾಂಶವನ್ನು ನಿಗದಿಪಡಿಸಿತ್ತು. ಉಳಿದ ಮೊತ್ತವನ್ನು ಎಂಟು ಮಾಸಿಕ ಕಂತುಗಳಲ್ಲಿ ಪಾವತಿಸಲು ಶಮಿಗೆ ಸೂಚಿಸಲಾಗಿತ್ತು. ಶಮಿ ಅವರ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಯನ್ನು ಪರಿಗಣಿಸಿ ಈ ಮೊತ್ತವು ತುಂಬಾ ಕಡಿಮೆ ಎಂದು ಹಸಿನ್ ಜಹಾನ್ ಹೇಳಿಕೊಂಡಿದ್ದಾರೆ. ಆಕೆ ತನಗಾಗಿ 7 ಲಕ್ಷ ರು.ಮತ್ತು ಮಗಳಿಗೆ 3 ರು. ಲಕ್ಷ ಮಾಸಿಕ ಜೀವನಾಂಶ ಕೇಳುತ್ತಿದ್ದಾರೆ. ಅರ್ಜಿಯ ಪ್ರಕಾರ, ಶಮಿ ಅವರ 2021-22 ರ ಆದಾಯ ತೆರಿಗೆ ರಿಟರ್ನ್‌ನಲ್ಲಿ ಅವರ ವಾರ್ಷಿಕ ಆದಾಯ ಸುಮಾರು 48 ಕೋಟಿ ಎಂದು ತೋರಿಸಲಾಗಿದೆ.
ಶಮಿ ಹೊಂದಿದ್ದ ರೇಂಜ್ ರೋವರ್, ಜಾಗ್ವಾರ್, ಮರ್ಸಿಡಿಸ್ ಮತ್ತು ಟೊಯೋಟಾ ಫಾರ್ಚೂನರ್ ಸೇರಿದಂತೆ ಐಷಾರಾಮಿ ವಾಹನಗಳ ಸಂಗ್ರಹದ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಶಮಿ ಮತ್ತು ಹಸಿನ್ ಜಹಾನ್ 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. 2018 ರಲ್ಲಿ ಹಸಿನ್ ಜಹಾನ್ ಕೋಲ್ಕತ್ತಾದ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು, ನಂತರ ಶಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ನಂತರ ಹಸಿನ್ ಜಹಾನ್ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಮಧ್ಯಂತರ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.






