ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ; ಚುನಾವಣೆಯಲ್ಲಿ ಗೆದ್ದರೆ ಸಂಸದ ಸ್ಥಾನ ಮುಂದುವರಿಯುತ್ತಾ?

Views: 436
ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಬಳಿಕ ಜೆಡಿಎಸ್ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದ ಸದಸ್ಯದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಈಗ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾಗಿದ್ದಾರೆ. ಆದರೆ ಹಾಸನ ಲೋಕಸಭಾ ಚುನಾವಣೆಗೆ ಈಗಾಗಲೇ ಮತದಾನ ಮುಗಿದಿದೆ. ಜೂನ್ 4 ರಂದು ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಇದೀಗ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದರೆ ಸಂಸದ ಸ್ಥಾನದಲ್ಲಿ ಮುಂದುವರಿಯುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.
ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸೋತರೆ ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗುತ್ತೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನಕ್ಕೆ ಕುತ್ತು ಬರಲಿದೆ. ಚುನಾವಣೆಯಲ್ಲಿ ಗೆದ್ದರೆ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಮುಂದುವರಿಯುತ್ತಾರೆ. ಆದರೆ ಪ್ರಜ್ವಲ್ ರೇವಣ್ಣ ಅವರ ಮೇಲೆ SIT ತನಿಖೆ ನಡೆಯುತ್ತಿರುವುದರಿಂದ ಜೆಡಿಎಸ್ ಪಕ್ಷವೇ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ. ವಿಡಿಯೋ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಸದ್ಯಕ್ಕೆ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ.






