ಗ್ರಾಮ ಪಂಚಾಯತ್ ಚುನಾವಣೆ ಸದ್ಯಕ್ಕೆ ಇಲ್ಲ: ಕೋರ್ಟ್ ಬಳಿ ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ
Views: 104
ಕನ್ನಡ ಕರಾವಳಿ ಸುದ್ದಿ:ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯವುದಿಲ್ಲ ಎಂಬುದು ಬಹುತೇಕ ಖಾತ್ರಿಯಾಗಿದೆ. ಸರ್ಕಾರ ಸೋಮವಾರ ಹೈಕೋರ್ಟಿನಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಇನ್ನೂ ಐದಾರು ತಿಂಗಳು ಗ್ರಾಮ ಪಂಚಾಯತ್ ಚುನಾವಣೆ ನಡೆಯುವುದು ಅನುಮಾನವಾಗಿದೆ.
ರಾಜ್ಯದಲ್ಲಿ 5,950 ಗ್ರಾಮ ಪಂಚಾಯ್ತಿಗಳಲ್ಲಿ ಸದ್ಯ 96 ಸಾವಿರಕ್ಕೂ ಅಧಿಕ ಸಂಖ್ಯೆಯ ಸದಸ್ಯರಿದ್ದು, ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು ನಾಲ್ಕು ವಾರ ಹಾಗೂ ಆನಂತರ ಮೀಸಲು ಪ್ರಕ್ರಿಯೆ ಅಂತಿಮಗೊಳಿಸಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ.
ಅವಧಿ ಮುಗಿದ ರಾಜ್ಯದ 5,950 ಗ್ರಾಮ ಪಂಚಾಯಿತಿ ಹಾಗೂ 187 ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗಕ್ಕೆ ಅನುಕೂಲವಾಗಲು ಅಂತಿಮ ಮೀಸಲು ಅಧಿಸೂಚನೆ ಹೊರಡಿಸಲು ತಕ್ಷಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ. ಸಿ.ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ , ಗ್ರಾಮ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರಕಾರ ಈವರೆಗೆ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸರಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು.
”ಈ ವರ್ಷದ ಜನವರಿಯಲ್ಲಿ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಪತ್ರ ಆಧರಿಸಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ 2026ರ ಜನವರಿ 28ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ಚಾಲ್ತಿಯಲ್ಲಿರುವ ಹಿಂದಿನ ಜನಗಣತಿ ಅಧರಿಸಿ ಪ್ರತಿ ಗ್ರಾಮ ಪಂಚಾಯ್ತಿಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ಕರ್ನಾಟಕ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡಬೇಕು. ಅದರಂತೆ, ಅಗತ್ಯ ಅಂಕಿ-ಸಂಖ್ಯೆಗಳ ಮಾಹಿತಿಯನ್ನು 15 ದಿನಗಳಲ್ಲಿ ಆಯೋಗಕ್ಕೆ ಒದಗಿಸುವಂತೆ ಮಾರ್ಚ್ 18ರಂದು ಕ್ಷೇತ್ರ ಮರುವಿಂಗಡಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ,” ಎಂದು ಸರಕಾರ ಕೋರ್ಟ್‌ಗೆ ತಿಳಿಸಿದೆ.
ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ಮಾಹಿತಿ ಬರಲು ಎರಡು ವಾರಗಳು ಬೇಕು. ಆ ಮಾಹಿತಿ ಪರಿಶೀಲಿಸಿ, ಸರಕಾರಕ್ಕೆ ಶಿಫಾರಸು ಮಾಡಲು ಆಯೋಗಕ್ಕೆ ಒಂದು ವಾರ ಕಾಲಾವಕಾಶ ಬೇಕು. ಆಯೋಗದ ಶಿಫಾರಸು ಪರಿಶೀಲಿಸಿ ಒಟ್ಟು ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರಕಾರಕ್ಕೆ ಒಂದು ವಾರ ಕಾಲಾವಕಾಶ ಬೇಕು ಎಂದು ಸರಕಾರ ಹೇಳಿದೆ.






