ಕೋಟ ವಿವೇಕ ಪ.ಪೂ ಕಾಲೇಜು:ವಿದ್ಯಾರ್ಥಿ ಸರಕಾರ ಹಾಗೂ ಶಾಲಾ ಸಂಸತ್ತು ಉದ್ಘಾಟನೆ

Views: 2
ಉಡುಪಿ: ‘ಒಂದು ದೇಶದ ಸಂಸತ್ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವೇ ಆಗಿರುತ್ತದೆ. ಇಲ್ಲಿ ತೆಗೆದು ಕೊಳ್ಳುವ ನಿರ್ಣಯಗಳು ಆ ದೇಶವನ್ನು ಪ್ರಗತಿ ಪಥದತ್ತ ಸಾಗಿಸಲು ಸಹಕಾರಿಯಾಗುತ್ತದೆ. ಹೀಗೆ ಶಾಲಾ ಎಂಬ ವಿದ್ಯಾದೇಗುಲದಲ್ಲಿ ಶಾಲಾ ಸಂಸತ್ ಅಥವಾ ‘ವಿದ್ಯಾರ್ಥಿ ಸರಕಾರ’ ಎನ್ನುವುದು ಬಹು ಮುಖ್ಯ ಪಾತ್ರವನ್ನು ಪಡೆಯುತ್ತದೆ. ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳ ಎಲ್ಲಾ ಕಾರ್ಯ ಚಟುವಟಿಕೆಗಳು ಸಸೂತ್ರವಾಗಿ ನಡೆಯಲು ಈ ಸಂಸತ್ ತುಂಬಾ ಸಹಕಾರಿ. ಹಾಗೆಯೇ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ, ಶಿಸ್ತು ಬದ್ಧವಾದ ಕಾರ್ಯವನ್ನು ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಶ್ರೀ ಮಂಜುನಾಥ ಎಸ್.ಕೆ., ವಕೀಲರು, ನೋಟರಿ, ಸಾಲಿಗ್ರಾಮ ಇವರು ತಿಳಿಸಿದರು.
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಈಗಿನಿಂದಲೇ ಬೆಳೆಯಲು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶಪ್ರಾಯರಾಗಿ ಬಾಳಬೇಕೆಂದು ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕರ್ತವ್ಯ, ಜವಾಬ್ದಾರಿ ನಿರ್ವಹಿಸಬೇಕೆಂದು ತಿಳಿಸಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಶುಭಾಶಂಸನೆಗೈದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಮಂತ್ರಿ ಮಂಡಲದ ಎಲ್ಲಾ ಸಚಿವರಿಗೆ ಪ್ರಾಂಶುಪಾಲರು ಪ್ರಮಾಣ ವಚನ ಬೋಧಿಸಿದರು.
ವಾಕ್ಪತಿಯಾಗಿ ವಿದ್ಯಾರ್ಥಿನಿ ಕುಮಾರಿ ಲಾವಣ್ಯ, ಉಪವಾಕ್ಪತಿಯಾಗಿ ನಾದೇಶ ಉಪಾಧ್ಯ ಇವರು ಆಯ್ಕೆಯಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸರಕಾರದ ಮುಖ್ಯಮಂತ್ರಿ ಶರಣ್ ಯು. ಸ್ವಾಗತಿಸಿದರು, ಉಪಮುಖ್ಯಮಂತ್ರಿ ಪಂಕಜ್ ವಂದಿಸಿದರು.
ಕುಮಾರಿ ಶ್ರೀಜನ್ಯ ಅಡಿಗ ನಿರೂಪಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಶ್ರೀ ಗಣೇಶ್‌ಕುಮಾರ್ ಶೆಟ್ಟಿ ಮತ್ತು ಶ್ರೀಮತಿ ರತಿ ಸಹಕರಿಸಿದರು.
ಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.