ಕೋಟೇಶ್ವರ ಸ.ಪೂ.ಕಾಲೇಜು: ಪಿಯುಸಿ ವಿಶಿಷ್ಟ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ

Views: 233
ಕೋಟೇಶ್ವರ : ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಪ್ರತಿಭಾ ಪುರಸ್ಕಾರ ಮತ್ತು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ ಕಾರ್ಯಕ್ರಮ ಜೂ.26 ರಂದು ನಡೆಸಲಾಯಿತು.
2023 -24ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 21 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆಗಳು ಮತ್ತು ಪ್ರಶಂಸ ಪತ್ರಗಳನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ದಿ.ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿರುವ ಡಾ.ಭಾಸ್ಕರ್ ಆಚಾರ್ಯ ಇವರು ನಗದು ಬಹುಮಾನಗಳನ್ನು ವಿತರಿಸಿ, ಶುಭ ಹಾರೈಸಿದರು. ಕೋಟೇಶ್ವರದ ಮೋಹನ್ ಮೆಡಿಕಲ್ಸ್ ನ ಮಾಲಕ ಶ್ರೀ ಮೋಹನ್ ಆಚಾರ್ಯ ಇವರು ವಿಭಾಗವಾರು ಪ್ರಥಮ ಸ್ಥಾನ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ನೀಡಿದ ನಗದು ಬಹುಮಾನ, ಪ್ರಶಂಸ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀನಾರಾಯಣ ತುಂಗ ಇವರು ಕೊಡ ಮಾಡಿದ ನಗದು ಬಹುಮಾನಗಳನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾಲೇಜಿನ ಉಪನ್ಯಾಸಕರುಗಳು ತಮ್ಮ ವಿಷಯಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ : ಇದೇ ಸಂದರ್ಭದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಗಿರುವ ಶ್ರೀ ಪ್ರಸಾದ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳು ಮತ್ತು ಅದರ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಉದಾಹರಣೆಗಳ ಸಮೇತ ವಿವರಿಸಿದರು. ಇನ್ನೋರ್ವ ಅತಿಥಿಯಾಗಿದ್ದ ಕುಂದಾಪುರದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ನಂದಕುಮಾರ್ ಇವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಪ್ರಾಂಶುಪಾಲರಾದ ಶ್ರೀಮತಿ ಸುಶೀಲ ಹೊಳ್ಳ ಇವರು ಅಧ್ಯಕ್ಷೀಯ ಭಾಷಣದಲ್ಲಿ ದಾನಿಗಳ ಕೊಡುಗೆಗಳನ್ನು ಸ್ಮರಿಸಿದರು. ಉಪನ್ಯಾಸಕರಾದ ಶ್ರೀಮತಿ ಅಮೃತ ಬಾನವಳಿಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಜ್ಯೋತಿ ಕುಮಾರಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಜಗದೀಶ್ ನಾಯಕ್ ಸ್ವಾಗತಿಸಿ, ಡಾ.ಸುಧಾಕರ್ ದೇವಾಡಿಗ ವಂದಿಸಿದರು.