ಕೋಟೇಶ್ವರ: ಶ್ರೀರಾಮ ಸೇವಾ ಸಂಘದ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಉದ್ಘಾಟನೆ

Views: 119
ಕುಂದಾಪುರ: ಕೆಪಿಎಸ್ ಕೋಟೇಶ್ವರದ ಪದವಿ ಪೂರ್ವ ವಿಭಾಗದಲ್ಲಿ ಶ್ರೀರಾಮ ಸೇವಾ ಸಂಘ ಕೋಟೇಶ್ವರ ಇವರ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅನ್ನದಾಸೋಹದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಸ್ಥೆಯ ಹಳೆ ವಿದ್ಯಾರ್ಥಿಗಳಾಗಿದ್ದು ಸಂಸ್ಥೆಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಜಿ ಎಸ್ ಬಿ ಸಮಾಜದ ಬಂಧುಗಳು ಹಲವಾರು ವರ್ಷಗಳಿಂದ ಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷವಿಡೀ ಅನ್ನ ಸಂತರ್ಪಣೆಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಕೋಟೇಶ್ವರ ಇದರ ಆಡಳಿತ ಧರ್ಮದರ್ಶಿಗಳಾದ ಶ್ರೀ ದಿನೇಶ್ ಕಾಮತ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಸಂಸ್ಥೆಯಲ್ಲಿ ತಾವು ವಿದ್ಯಾರ್ಥಿಗಳಾಗಿದ್ದಾಗ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಾಜಿ ಧರ್ಮದರ್ಶಿಗಳಾದ ಶ್ರೀ ಶ್ರೀಧರ್ ಕಾಮತ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನದ ಮೌಲ್ಯಗಳನ್ನು ತಿಳಿಹೇಳಿದರು.
ಶ್ರೀರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ ಕಾಮತ್ ಇವರು ಪ್ರಾಸ್ತಾವಿಕ ಮಾತನಾಡುತ್ತಾ, ಅನ್ನದಾಸೋಹದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀರಾಮ ಸೇವಾ ಸಂಘದ ಕಾರ್ಯದರ್ಶಿಗಳಾದ ಶ್ರೀ ಸದಾನಂದ ಪೈ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಆಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಕುಮಾರಿ ಸಿಂಚನ ಹಾಗೂ ಕುಮಾರಿ ಶ್ರದ್ಧಾ ಅನ್ನದಾತರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಸುಶೀಲಾ ಹೊಳ್ಳ ಅಧ್ಯಕ್ಷೀಯ ಭಾಷಣದಲ್ಲಿ ಈ ಅನ್ನದಾಸೋಹದ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನುಕೂಲತೆಗಳನ್ನು ವಿವರಿಸುತ್ತಾ ಶ್ರೀರಾಮ ಸೇವಾ ಸಂಘದ ಎಲ್ಲರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು. ಎಲ್ಲಾ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಾನಿಗಳಿಗೆ ಕೃತಜ್ಞತಾ ಪೂರ್ವಕ ನುಡಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇವಾ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಪೈ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಉಜ್ವಲ್ ಕಾಮತ್, ಶ್ರೀ ಜಗದೀಶ್ ಭಟ್, ಶ್ರೀ ಸುಹಾಸ್ ಪೈ, ವಿವೇಕ್ ಪೈ ಹಾಗೂ ಶ್ರೀ ರಾಜೇಂದ್ರ ಕಾಮತ್ ಇವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀ ಹರೀಶ್ ನಾಯಕ್ ಸ್ವಾಗತಿಸಿದರು. ಶ್ರೀ ಗಣೇಶ್ ಹೆಬ್ಬಾರ್ ಧನ್ಯವಾದ ಸಮರ್ಪಿಸಿದರು. ಶ್ರೀ ಪ್ರವೀಣ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.