ಕೋಟಿ ವಿವೇಕ ವಿದ್ಯಾಸಂಸ್ಥೆ: ಶಿಕ್ಷಕರ ದಿನಾಚರಣೆ;ಗುರುವಂದನೆ- ಅಭಿವಂದನೆ

Views: 5
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ಶ್ರೇಷ್ಠ ವೃತ್ತಿಯಾಗಿದ್ದು ಶಿಕ್ಷಕರು ನೀಡುವ ಶಿಕ್ಷಣ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ನಿಜ ಅರ್ಥದಲ್ಲಿ ಮನುಷ್ಯನನ್ನಾಗಿಸುವ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿ, ಬದುಕನ್ನು ನಿರೂಪಿಸುವುದೇ ಆಗಿದೆ’ ಆದ್ದರಿಂದ ಶಿಕ್ಷಕರು ಈ ದಿಸೆಯಲ್ಲಿ ಯೋಚಿಸಿ ಹೆಜ್ಜೆಯನ್ನು ಇಡಬೇಕು. ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಸಾಗಬೇಕು ಎಂದು ಕಾಳಾವರ ವರದರಾಜ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ನಾಯಕ್ ಇವರು ತಿಳಿಸಿದರು.
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೋಟ ವಿದ್ಯಾಸಂಘ (ರಿ.) ಹಾಗೂ ವಿವೇಕ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಶಿಕ್ಷಕ ದಿನಾಚರಣೆಯ ಸಂಭ್ರಮದಲ್ಲಿ ಪರಿಸರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರನ್ನು ಸನ್ಮಾನಿಸುವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡುತ್ತಾ ತಿಳಿಸಿದರು.
ಅವರು ಮಾತನಾಡುತ್ತಾ, ಇಂದಿನ ಬದಲಾಗುತ್ತಿರುವ ಶಿಕ್ಷಣದ ಕಾಲಘಟ್ಟದಲ್ಲಿ ಕೇವಲ ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಸಾಧನವನ್ನಾಗಿಸುವ ಕಾರ್ಯ ನಡೆಯುತ್ತದೆ. ಇದು ವಿಪರ್ಯಾಸ. ವಿದ್ಯಾರ್ಥಿಗಳಲ್ಲಿ ತಮಗೆ ಬೇಕು-ಬೇಡವಾದ ಅಂಶಗಳನ್ನು ಗ್ರಹಿಸುವ, ಅವರ ಮನಸ್ಸಿನಲ್ಲಿರುವ ಸಕಾರತ್ಮಕ ಭಾವನೆಗಳನ್ನು ಹೋಗಲಾಡಿಸಿ ರಚನಾತ್ಮಕ ಭಾವನೆಗಳನ್ನು ಮೂಡಿಸಬೇಕು. ಕೇವಲ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಗೆದ್ದಾಗ ಮಾತ್ರ ಅವರ ಬೆನ್ನು ತಟ್ಟುವುದಲ್ಲ. ಸೋತಾಗಲು ಧೈರ್ಯ ತುಂಬುವ, ಸಾಂತ್ವಾನ ನೀಡುವ ಕಾರ್ಯ ಆಗಬೇಕೆಂದು ತಿಳಿಸಿದರು.
ಕೋಟ ವಿದ್ಯಾಸಂಘದ ಕೋಶಾಧಿಕಾರಿಗಳಾದ ಶ್ರೀ ವಲೇರಿಯನ್ ಮೆನೇಜಸ್ ಅಧ್ಯಕ್ಷತೆಯನ್ನು ವಹಿಸಿ, ನಿವೃತ್ತರ ಬಗ್ಗೆ ತಿಳಿಸಿ, ಮೆಚ್ಚುಗೆಯ ಮಾತುಗಳನ್ನಾಡಿದರು.
ಜೊತೆ ಕಾರ್ಯದರ್ಶಿ ಶ್ರೀ ಪಿ. ಮಂಜುನಾಥ ಉಪಾಧ್ಯರು ನಿವೃತ್ತರಿಗೆ ಶುಭ ಹಾರೈಸಿದರು.
ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಗಣೇಶ್ ಜಿ,ಶ್ರೀ ನಾಗೇಶ್ ಮಧ್ಯಸ್ಥ, ಶ್ರೀ ನಾಗೇಶ್ ಮಧ್ಯಸ್ಥ, ಶ್ರೀಮತಿ ಶಶಿಕಲಾ ಇವರನ್ನು ವಿದ್ಯಾಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಮ್ಮಾನ ಸ್ವೀಕರಿಸಿದ ನಿವೃತ್ತರು ತಮ್ಮ ಸೇವಾನುಭವಗಳನ್ನು ಹಂಚಿಕೊಂಡರು.
ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಭಾಸ್ಕರ ನಾಯಕ್, ಮುಖ್ಯ ಸಹಶಿಕ್ಷಕ ಶ್ರೀ ವೆಂಕಟೇಶ ಉಡುಪ ಉಪಸ್ಥಿತರಿದ್ದು ಶ್ರೀ ಕೆ. ಜಗದೀಶ ಹೊಳ್ಳರು ಧನ್ಯವಾದವನ್ನಿತ್ತರು. ಶಿಕ್ಷಕ ಪ್ರಭಾಕರ ಅಡಿಗರು ಕಾರ್ಯಕ್ರಮ ನಿರೂಪಿಸಿದರು.