ಇತರೆ

ಕೊಲ್ಲೂರು ಸಮೀಪ ಭೀಕರ ರಸ್ತೆ ಅಪಘಾತದ ಸ್ಥಳದಲ್ಲಿ ಆಕ್ರಂದನವನ್ನೇ ಬಂಡವಾಳ ಮಾಡಿಕೊಂಡು ಮೃತದೇಹ ದಿಂದ ಚಿನ್ನಾಭರಣ ದೋಚಿದ ಚೋರರು!

Views: 443

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಶವದ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿಡಿಗೇಡಿಗಳು ಲಪಟಾಯಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ ಏನು?

ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ಮಧ್ಯೆ ಕೊಲ್ಲೂರು ದಳಿ ಎಂಬಲ್ಲಿ ಮೇ 17 ರಂದು ರವಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಜೀಪಿನಲ್ಲಿದ್ದ ಎಂಟು ಮಂದಿ ಗಾಯಗೊಂಡಿದ್ದು, ಕೇರಳ ಮೂಲದ ಜ್ಯೋತಿ ಮತ್ತು ಅರಿಯಾ ಅನೂಫ್ ಎಂಬಿಬ್ಬರು ಮೃತಪಟ್ಟಿದ್ದರು.ಹಲವು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿತ್ತು.

ಅಪಘಾತ ಸಂಭವಿಸಿದ ವೇಳೆ ಸ್ಥಳದಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆಕ್ರಂದನವನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣ ಕಳ್ಳತನ ಮಾಡಿದ್ದಾರೆ.

ಅಪಘಾತ ನಡೆದ ಸ್ಥಳದಿಂದ ಶವವನ್ನು ಸಾಗಿಸುವ ಸಂದರ್ಭದಲ್ಲೇ ಈ ಕೃತ್ಯ ನಡೆದಿದೆ.ಘಟನೆ ನಡೆದು ಒಂದು ವಾರ ಕಳೆದ ಬಳಿಕ, ಮೃತ ಜ್ಯೋತಿ ಅವರ ಕುಟುಂಬಸ್ಥರು ಮೈಮೇಲಿದ್ದ ಒಡವೆಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತದೇಹದ ಮೇಲಿದ್ದ ಆಭರಣಗಳನ್ನು ಕಳವು ಮಾಡಿರುವ ಈ ಅಮಾನವೀಯ ಕೃತ್ಯದ ಬಗ್ಗೆ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕಾದ ಸಮಯದಲ್ಲಿ ಮೃತದೇಹದಿಂದಲೇ ಒಡವೆ ಕದ್ದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button
error: Content is protected !!