ಇತರೆ

ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ :ಇಬ್ಬರು ಸಾವು, 15 ಮಂದಿಗೆ ಗಾಯ

Views: 236

ಕನ್ನಡ ಕರಾವಳಿ ಸುದ್ದಿ: ರಸ್ತೆಯಲ್ಲಿ‌ ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 15 ಮಂದಿ‌ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ತಾಲೂಕಿನ ಗಾಜನೂರು ಡ್ಯಾಂ ಬಳಿ ಸಂಭವಿಸಿದೆ.‌

ಮಂಗಳೂರಿನಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕಡೆ ಹೊರಟಿದ್ದ KA 51 C0146 ದುರ್ಗಾಂಬ ಬಸ್ ಗಾಜನೂರು ಬಳಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ AP 04 UB 3339 ಆಂಧ್ರ ಪ್ರದೇಶದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರ ಗಾಯಗೊಂಡ ಬಸ್ ಕಂಡಕ್ಟರ್ ಅಣ್ಣಪ್ಪ (40) ಹಾಗೂ ಚಳ್ಳಕೆರೆ ನಿವಾಸಿ ಹರ್ಷಿತ್ (35) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಿಂದ ಶಿವಮೊಗ್ಗ ಮಂಗಳೂರು ರಾಷ್ಟ್ರೀಯ ಹೆದ್ದಾರಿ 169(A) ರಲ್ಲಿ ಕೆಲಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು‌. ಸ್ಥಳಕ್ಕೆ ತುಂಗಾ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಹಾಗೂ ತಂಡ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಲಾರಿ ಕತ್ತಲಲ್ಲಿ ನಿಂತಿರುವುದು ಹಾಗೂ ಬಸ್ ವೇಗವಾಗಿ ಚಲಿಸುತ್ತಿರುವುದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಗಾಯಾಳುಗಳ ಗುರುತು ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!