ಕುಂದಾಪುರ: ಶಾಲೆಗೆ ಹೋಗುವಾಗ ಮುಖ್ಯೋಪಾಧ್ಯಾಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

Views: 924
ಕನ್ನಡ ಕರಾವಳಿ ಸುದ್ದಿ: ಕಮಲಶಿಲೆಯ ಹತ್ತಿರದ ಹಳ್ಳಿಹೊಳೆ ಗ್ರಾಮದ ಸುಳ್ಳೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕುಬೇರಪ್ಪ (49) ಸೋಮವಾರ ಬೆಳಿಗ್ಗೆ ಶಾಲೆಗೆ ಹೋಗುವಾಗ ಕಮಲಶಿಲೆ ಎಂಬಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ ಪತ್ನಿ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಚಿತ್ರದುರ್ಗದ ನಿವಾಸಿಯಾಗಿದ್ದ ಅವರು ಹೊಸಂಗಡಿ ಕೆಪಿಸಿ ಕಾಲನಿಯ ಸರಕಾರಿ ಕ್ವಾರ್ಟಸ್‌ನಲ್ಲಿ ವಾಸವಾಗಿದ್ದರು.
ಸೋಮವಾರ ತಮ್ಮ ಬೈಕ್‌ನಲ್ಲಿ ಸುಳ್ಳೋಡು ಶಾಲೆಗೆ ಹೊರಟಿದ್ದ ಅವರು ಕಮಲಶಿಲೆಯ ಪಾರೆ ಬಳಿ ಬೈಕನ್ನು ರಸ್ತೆಯ ಬದಿಯಲ್ಲಿಟ್ಟು ರೈನ್ ಕೋಟ್ ಸಮೇತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 22 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.ಕಳೆದ 4 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಮುಂಭಡ್ತಿ ಹೊಂದಿ ಸುಳ್ಳೋಡು ಶಾಲೆಗೆ ವರ್ಗಾವಣೆಗೊಂಡಿದ್ದರು.
ಕುಬೇರಪ್ಪ ಅವರು ಹೊಸಂಗಡಿಯ ಕೆಪಿಸಿ ಕಾಲನಿಯಲ್ಲಿ ಹಿಟ್ಟಿನ ಗಿರಣಿ ಮಾಡಿಕೊಂಡಿದ್ದರು. ಅವರು ಸಂಬಂಧಿಕರ ಮದುವೆಗೆ ಮತ್ತು ಇನ್ನಿತರ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಹಲವು ಸಾಲಗಾರರಿಗೆ ಜಾಮೀನು ಹಾಕಿದ್ದರು.ಸಾಂಸಾರಿಕ ಜೀವನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರದೀಪ್ ಶೆಟ್ಟಿ, ಡಿವೈಎಸ್‌ಪಿ ಕುಲಕರ್ಣಿ, ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ ಗೌಡ, ಪಿಎಸ್‌ಐ ನಾಸೀರ್ ಹುಸೇನ್ ಭೇಟಿ ನೀಡಿದರು.ಮೃತರ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.