ಕರಾವಳಿ
ಕುಂದಾಪುರ: ಬೀಜಾಡಿಯಲ್ಲಿ ಕಾರು ಶೋರೂಂನ ಬೀಗ ಒಡೆದು ಅಪ್ರಾಪ್ತ ಬಾಲಕರಿಂದ ಕಳ್ಳತನಕ್ಕೆ ಯತ್ನ!

Views: 269
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಸಾಯಿ ಗ್ರೀಮ್ ಕಾರು ಶೋರೂಂನ ಬೀಗವನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಫೆ.19ರಂದು ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಆರೋಪಿಗಳು ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದು, ಮಳಿಗೆಯ ಬೀಗವನ್ನು ಕಬ್ಬಿಣದ ರಾಡ್ ಹಾಗೂ ಸುತ್ತಿಗೆಯಿಂದ ಒಡೆಯುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಪತ್ತೆಯಾಗಿದೆ.
ಕಳ್ಳತನಕ್ಕೆ ಯತ್ನಿಸುತ್ತಿರುವ ಸಿಸಿ ಟಿವಿ ದೃಶ್ಯವನ್ನು ಮಳಿಗೆಯ ಪಾಲುದಾರ ನಾಗೇಂದ್ರ ಅವರು ಮೊಬೈಲ್ನಲ್ಲಿ ನೋಡಿ ಕೂಡಲೇ ಮಾಲಕರಾದ ನಿತಿನ್ ಅವರಿಗೆ ತಿಳಿಸಿದರು. ನಿತಿನ್ ಹಾಗೂ ನಾಗೇಂದ್ರ ಸ್ಥಳಕ್ಕೆ ಬಂದಿದ್ದಾರೆ, ಅವರನ್ನು ಕಂಡು ಅಪ್ರಾಪ್ತ ಬಾಲಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾಗುತ್ತಲೆ ಕುಂದಾಪುರ ಪೊಲೀಸರು ಬಾಲಕರಿಬ್ಬರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದ ನಂತರ ರಿಮ್ಯಾಂಡ್ ಹೋಮ್ಗೆ ಕಳುಹಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






