ಕುಂದಾಪುರ ತಹಶೀಲ್ದಾರ್ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ದೂರಿಗೆ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ: ಲೋಕಾಯುಕ್ತಕ್ಕೆ ದೂರು

Views: 18
ಕುಂದಾಪುರ: ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಕೋರಿಕೊಂಡ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂದು ಇಲ್ಲಿನ ತಹಶೀಲ್ದಾರ್ ವಿರುದ್ಧ ಖಾರ್ವಿ ಮೇಲ್ಕೇರಿ ನಿವಾಸಿ ಸತೀಶ್ ಖಾರ್ವಿ ಅವರು ಕಂದಾಯ ಸಚಿವರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇಲ್ಲಿನ ಕಸ್ಬಾ ನಿವಾಸಿ ಜಯಾನಂದ ಅವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಅದನ್ನು ರದ್ದು ಪಡಿಸಬೇಕೆಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಶಾಲೆ ಸೇರ್ಪಡೆ ಸಂದರ್ಭ ತಂದೆ ಹೆಸರು ತಪ್ಪಾಗಿ ನಮೂದಾಗಿದ್ದು ತಂದೆಯ ಬದಲು ಅಜ್ಜನ ಹೆಸರು ನಮೂದಾಗಿತ್ತು. ಅನಂತರ ಅದನ್ನು ಸರಿಪಡಿಸಲಾಗಿದೆ ಎಂದು ಜಯಾನಂದ ಅವರು ಹೇಳಿದ್ದರು. ಆದರೆ ತಹಶೀಲ್ದಾರ್ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಕಂದಾಯ ಅಧಿಕಾರಿಯವರೆಗೆ ಎಲ್ಲ ರೀತಿಯ ವರದಿ ತರಿಸಿಕೊಂಡು ತಂದೆ ಹೆಸರನ್ನು ತಪ್ಪಾಗಿ ನೀಡಿದ ದಾಖಲೆಗಳನ್ನು ಪರಿಶೀಲಿಸಿಯೂ ಪ್ರಮಾಣಪತ್ರ ಊರ್ಜಿತದಲ್ಲಿಟ್ಟಿದ್ದಾರೆ.
ಇದು ವೈಯಕ್ತಿಕವಾಗಿ ಆರೋಪಿಗೆ ಸಹಾಯ ಮಾಡುವ ಉದ್ದೇಶದಂತಿದೆ. ಈ ಘಟನೆಯ ಬಳಿಕ ಪಡೆದ ಮಾಹಿತಿ ಹಕ್ಕಿನ ದಾಖಲೆಯಂತೆ ಕಲಿತ ಶಾಲೆಯಿಂದ ಪಡೆದ ಪ್ರಮಾಣಪತ್ರದಲ್ಲೂ ಜಾತಿ ವಿವರ ತಿದ್ದಿದ್ದಾಗಿದೆ. ಈ ಬಗ್ಗೆ ಶಿಕ್ಷಣಾಧಿಕಾರಿ ಖಚಿತಪಡಿಸಿ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಕ್ರಮ ಕೈಗೊಳ್ಳಬೇಕು ಎಂದು ದೂರಿದ್ದಾರೆ.