ಕುಂದಾಪುರ:ವಕ್ವಾಡಿ ಕಿರು ಸೇತುವೆ ಬಳಿಯಲ್ಲಿ ತಡೆಗೋಡೆ ಇಲ್ಲದೆ ಅಪಾಯ ಕಾದಿದೆ.!
Views: 169
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಚಾರು ಕೊಟ್ಟಿಗೆಯಿಂದ ಬೀಜಾಡಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕದ ರಸ್ತೆ ಮಾರ್ಗದ ವಕ್ವಾಡಿ ಕಿರು ಸೇತುವೆ ಬಳಿ ತಡೆಗೋಡೆ ಇಲ್ಲದೆ ಮೃತ್ಯುವಿಗೆ ಆಹ್ವಾನ ನೀಡುವಂತೆ ಕಾದು ಕುಳಿತಿದೆ.
ದಿನನಿತ್ಯ ಸಂಚರಿಸುವ ವಾಹನ ಸಂಚಾರಿಗಳು, ಪಾದಾಚಾರಿ ಶಾಲಾ ಮಕ್ಕಳಿಗೆ ಸಂಚಾರಕ್ಕೆ ಅಪಾಯ ಸ್ಥಿತಿಗೆ ತಂದೊಡ್ಡಿದೆ. ರಸ್ತೆ ಬದಿಯಲ್ಲಿ ನೀರಿನ ಪೈಪ್ ಲೈನನ್ನು ಬೇಜವಾಬ್ದಾರಿಯ ಕಾಮಗಾರಿಕೆಯಿಂದಾಗಿ ವಾಹನ ಸಂಚಾರಕ್ಕೆ ಇನ್ನಷ್ಟು ತೊಂದರೆಯಾಗಿದೆ.

ರಾತ್ರಿ ಹೊತ್ತು ಈ ಸ್ಥಳದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ವೇಗವಾಗಿ ಬರುವ ವಾಹನಗಳಿಗೆ ಜಾಗ ನೀಡುವ ಯತ್ನದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಿಯಂತ್ರಣ ತಪ್ಪಿ ಸೇತುವೆ ಬಳಿಯಲ್ಲಿರುವ ಹೊಳೆಗೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.
ಇಕ್ಕಟ್ಟಾದ ಸೇತುವೆಯ ಬಳಿಯ ಸ್ಥಳದಲ್ಲಿ ವಾಹನಗಳು ಬರುವಾಗ ಪಕ್ಕಕ್ಕೆ ನಿಲ್ಲಿಸಬೇಕಾಗುತ್ತದೆ. ಅಕಸ್ಮಾತ್ ಮುನ್ನುಗ್ಗಿದರೆ ಅನಾಹುತ ಗ್ಯಾರಂಟಿ ಈಗಾಗಲೇ ಇದಕ್ಕೆ ಉದಾಹರಣೆ ಎಂಬಂತೆ ಇದೇ ಸ್ಥಳದಲ್ಲಿ ಸಪ್ಟೆಂಬರ್ 31 ರಂದು ಕಾರು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಆಯತಪ್ಪಿ ಹೊಳೆಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಮಳೆಗಾಲದಲ್ಲಂತೂ ಹೊಳೆ ತುಂಬಿ ಹರಿಯುವಾಗ ಇನ್ನಷ್ಟು ಅಪಾಯಕಾದಿದೆ.
ಇಲಾಖೆ ಅಧಿಕಾರಿಗಳು ಇಷ್ಟೆಲ್ಲಾ ಅಪಘಾತಗಳು ಸಂಭವಿಸುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ವಿಪರ್ಯಾಸ. ಅಪಘಾತಗಳು ಸಂಭವಿಸುವ ಮೊದಲೇ ಕೂಡಲೇ ರಸ್ತೆಯ ಬದಿಗೆ ತಡೆಗೋಡೆ ನಿರ್ಮಿಸಲು ಸಾರ್ವಜನಿಕರ ಅಗ್ರಹವಾಗಿದೆ.







