ಅಂಡಮಾನ್ ಸಮೀಪ ‘ಮೋಂಥಾ’ ಚಂಡಮಾರುತ ಅಬ್ಬರಕ್ಕೆ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ !
Views: 108
ಕನ್ನಡ ಕರಾವಳಿ ಸುದ್ದಿ:ಕಳೆದ ಐದು ದಿನಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯ ಪ್ರಕಾರ ಈ ಮಳೆ ಇಂದು ಮತ್ತಷ್ಟು ಜೋರಾಗಲಿದೆ. ಅಂಡಮಾನ್ ಸಮೀಪ ಸಮುದ್ರದಲ್ಲಿ ಹೊಸ ಚಂಡಮಾರುತ ಚಲಿಸುತ್ತಿದ್ದು, ಇದು ಈ ವರ್ಷದ ಮೊದಲ ಚಂಡಮಾರುತವಾಗಿದ್ದು, ಅದಕ್ಕೆ ‘ಮೋಂಥಾ’ ಎಂದು ಹೆಸರಿಡಲಾಗಿದೆ. ಈ ಚಂಡಮಾರುತವು ಅಕ್ಟೋಬರ್ 27 ರ ವೇಳೆಗೆ ತೀವ್ರ ಚಂಡಮಾರುತಕ್ಕೆ ಪರಿವರ್ತನೆ ಹೊಂದುವ ಸಾಧ್ಯತೆ ಇದೆ.
ಈ ಚಂಡಮಾರುತದ ಪರಿಣಾಮದಿಂದ ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಗುಡುಗು ಮತ್ತು ಮಳೆ ಉಂಟಾಗುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿ ಪ್ರದೇಶದಲ್ಲಿ ಈ ಹವಾಮಾನ ವ್ಯವಸ್ಥೆ ರೂಪುಗೊಳ್ಳುತ್ತಿರುವುದರಿಂದ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಸಕಲೇಶಪುರ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ತಿಳಿಸಲಾಗಿದೆ.
ಬೆಂಗಳೂರಿನಲ್ಲಿಯೂ ಇಂದು ಸಂಜೆ ನಂತರ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತವು ದೇಶದ ಮಳೆ ಮೋಡವನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದ್ದು, ಸಾರ್ವಜನಿಕರಿಗೆ ಅತೀ ಹೆಚ್ಚು ಎಚ್ಚರಿಕೆಯಿಂದ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ.






