ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ
ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡಿ ಮನೋದೈಹಿಕ ಉಲ್ಲಾಸ ಚಟುವಟಿಕೆಗಳಲ್ಲಿ ನಿರತರಾಗಿರಿ---ಸಂತೋಷ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ ಹೊಸೂರು.
Views: 270
ಕನ್ನಡ ಕರಾವಳಿ ಸುದ್ದಿ; “ವಿದ್ಯಾರ್ಥಿಗಳು ಮೊಬೈಲ್ ನ ಅತಿಯಾದ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡಿ ಮನೋದೈಹಿಕ ಉಲ್ಲಾಸ ತರುವ ಚಟುವಟಿಕೆಗಳಲ್ಲಿ ನಿರತರಾಗಬೇಕು. ನಿತ್ಯಜೀವನದಲ್ಲಿ ಆ ಮೂಲಕ ಹುರುಪು ಪಡೆದು ಪೋಷಕರು ಹೆಮ್ಮೆ ಪಡುವಂಥ ಸಾಧನೆ ಮಾಡಬೇಕು” ಎಂದು ಹೊಸೂರಿನ ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿಯವರು ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಬೈಂದೂರಿನ ಮಾಜಿ ಶಾಸಕರೂ ಆದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಿ.ಇ.ಎಸ್ ಸಂಸ್ಥೆಗಳ ಸುವರ್ಣ ಸಂಭ್ರಮದ ವಿಶೇಷ ವರ್ಷದಲ್ಲಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತುಂಬು ಸಂಭ್ರಮದಿಂದ ಮುಂಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆನ್ನುತ್ತಾ ಕ್ರೀಡೋತ್ಸವಕ್ಕೆ ಶುಭಕೋರಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಯವರಾದ ಶ್ರೀ ಸೀತಾರಾಮ ನಕ್ಕತ್ತಾಯರವರು, ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕಿ ರೂಪಾ ವೆರ್ಣೇಕರ್ ಕ್ರೀಡಾಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಷಾ ಡಿಸೋಜಾರವರು ಪಥ ಸಂಚಲನ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈ ವಂದನಾರ್ಪಣೆಗೈದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಂಶಿತ್, ಸಪ್ತಮಿ ಹಾಗೂ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಕೀರ್ತನಾ ಇವರು ಕ್ರೀಡಾಗ್ರೇಸರರಾಗಿ ಮೂಡಿಬಂದರು.






