ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನವಸಂಕೇತ್- ಫ್ರೆಷರ್ಸ್ ಫಿಯೆಸ್ಟಾ ಕಾರ್ಯಕ್ರಮ

Views: 63
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನವಸಂಕೇತ್- ಫ್ರೆಷರ್ಸ್ ಫಿಯೆಸ್ಟಾ ವನ್ನು ಉದ್ಘಾಟಿಸಲಾಯಿತು.
ಕಿರುತೆರೆ ನಟಿ, ರಿಯಾಲಿಟಿ ಶೋ ಮಜಾಭಾರತ, ರಾಜಾ ರಾಣಿ ಖ್ಯಾತಿಯ ಪ್ರಿಯಾಂಕಾ ಕಾಮತ್ ಅವರು ಉದ್ಘಾಟಿಸಿ, ಮಾತನಾಡುತ್ತಾ “ಜೀವನದ ಆಧಾರಸ್ತಂಭ ಕಟ್ಟಲು ಮುಖ್ಯವಾಗುವ ಪಿ.ಯು.ಸಿ ಹಂತ ವಿದ್ಯಾರ್ಥಿಗಳೆದರು ಹಲವು ಕ್ಷೇತ್ರಗಳನ್ನು ತೆರೆದಿಡುತ್ತದೆ. ಸಾಂಸ್ಕ್ರತಿಕ ಮತ್ತು ಆಟೋಟಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರೂ, ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕೆ ಹೋದ ಮೇಲೆ ಶಿಕ್ಷಣದ ಹಿನ್ನೆಲೆ ಇದ್ದರೆ ಮಾತ್ರ ಯಶಸ್ಸು ಪಡೆಯಬಹುದು ” ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಕ್ತನ ವಿದ್ಯಾರ್ಥಿ ಶ್ರೀ ಅಮಿತ್ ನಾಯಕ್ ರವರು ಆರ್. ಎನ್. ಎಸ್. ಕಾಲೇಜು ತನ್ನನ್ನು ರೂಪಿಸಿದ ಬಗೆಯನ್ನು ಸ್ಮರಿಸಿಕೊಂಡರು. ಇನ್ನೋರ್ವ ಮುಖ್ಯ ಅತಿಥಿ ಗಾಯಕಿ ರಂಜನಾ ರಾಘವೇಂದ್ರ ಪ್ರಭು ರವರು ಎಳೆ ವಯಸ್ಸಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾಗಿ ಸಮಾಜಘಾತುಕ ಕಾರ್ಯಗಳತ್ತ ಸೆಳೆಯಲ್ಪಡಬಾರದೆಂದು ಕರೆ ನೀಡಿದರು.
ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಝಾ ರವರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಉಪನ್ಯಾಸಕಿ ಅರುಣಾ ಹೊಳ್ಳ ಲಕ್ಕಿ ಡ್ರಾ ಕಾರ್ಯಕ್ರಮ ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯ ರವರು ನವಸಂಕೇತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಾಣಿಜ್ಯ ವಿಭಾಗದ ವಿದ್ಯಾ ಮತ್ತು ನಿರೀಕ್ಷಾ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಪೂರ್ವಿತಾ, ಸ್ನೇಹಾ ಮತ್ತು ಭೂಮಿಕಾ ಅತಿಥಿ ಪರಿಚಯ ಮಾಡಿದರು. ಶರಧಿ ಮತ್ತು ತಂಡ ಪ್ರಾರ್ಥಿಸಿದರು. ವಿಜ್ಞಾನ ವಿಭಾಗದ ಶ್ರೇಯಾ ಧನ್ಯವಾದ ಸಲ್ಲಿಸಿದರು. ವಿಜ್ಞಾನ ವಿಭಾಗದ ಕೌಶಿಕ್ ಮತ್ತು ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
ಫ್ರೆಷರ್ಸ್ ಡೇ ಯ ಅಂಗವಾಗಿ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ತರಗತಿವಾರು ಸಾಂಸ್ಕ್ರತಿಕ ಸ್ಪರ್ಧೆ ಮತ್ತು ಪ್ರಥಮ ಪಿ.ಯು ವಿದ್ಯಾರ್ಥಿಗಳಿಗಾಗಿ ಕೆಲವು ಮನೋರಂಜನೆಯ ಆಟಗಳನ್ನು ಆಯೋಜಿಸಲಾಯಿತು.