ಕುಂದಾಪುರ:ಉದ್ಯಮಿ ಇಡೂರು ಕರುಣಾಕರ ಶೆಟ್ಟಿ ಹೃದಯಾಘಾತದಿಂದ ನಿಧನ
Views: 250
ಕನ್ನಡ ಕರಾವಳಿ ಸುದ್ದಿ: ಹೊಟೇಲ್ ಉದ್ಯಮಿ ಹಾಗೂ ಕುಂದಾಪುರ ತಾಲೂಕು ಚಿತ್ತೂರಿನಲ್ಲಿರುವ ಚಿತ್ತೂರು ಪ್ಯೂಯಲ್ಸ್‌ನ ಮಾಲಕರಾಗಿರುವ ಇಡೂರು ನಡುಮನೆ ಕರುಣಾಕರ ಶೆಟ್ಟಿ (49) ಅವರು ಫೆ. 1ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಹಾಲ್ಕಲ್‌ನಲ್ಲಿರುವ ತನ್ನ ಮಾಲಕತ್ವದ ಖುಷಿ ರೆಸ್ಟೋರೆಂಟ್‌ನಲ್ಲಿರುವಾಗ ಮಧ್ಯಾಹ್ನದ ವೇಳೆಗೆ ಎದೆನೋವು ಕಾಣಿಸಿಕೊಂಡು ಕೊನೆಯುಸಿರೆಳೆದರು.
ಇಡೂರು ನಡುಮನೆ ಕರುಣಾಕರ ಶೆಟ್ಟಿ ಅವರು ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್, ಇಂಡಿಯನ್ ಪೆಟ್ರೋಲ್ ಬಂಕ್, ಹಾಗೂ ಬಳ್ಳಾರಿಯಲ್ಲಿ ರೇಣುಕಾ ವೆಜ್ ಹಾಗೂ ಹೊಟೇಲ್ ದ್ವಾರಕಾ ರೆಸಿಡೆನ್ಸಿ ಲಾಡ್ಡಿಂಗ್ – ರೆಸ್ಟೋರೆಂಟ್ ನಡೆಸುತ್ತಿದ್ದರು. ತಮ್ಮ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಾ, ವ್ಯಾಪಾರ ಕ್ಷೇತ್ರದಲ್ಲಿ ಗೌರವ ಮತ್ತು ಆದರವನ್ನು ಗಳಿಸಿದ್ದ ಅವರು ತಮ್ಮ ಸೌಜನ್ಯ, ಪ್ರಾಮಾಣಿಕತೆ ಹಾಗೂ ಸಮಾಜದೊಂದಿಗೆ ಹೊಂದಿದ್ದ ಆತ್ಮೀಯ ಸಂಬಂಧಗಳಿಂದ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು.
ಕುಂದಾಪುರದ ಚಿತ್ತೂರಿನಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಕಲ ಕನ್ವೆನ್ಸನ್ ಸಭಾಂಗಣ ಮತ್ತು ಹಾಲ್ಕಲ್‌ನಲ್ಲಿ ಖುಷಿ ರೆಸ್ಟೋರೆಂಟ್ ಸ್ಥಾಪಿಸಿದ್ದರು. ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಚಟುವಟಿಕೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿ ಕೊಂಡಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿದ್ದರು.






