ಕಾಷ್ಠ ಶಿಲ್ಪಕಲೆಗಳ ಕ್ಷೇತ್ರ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ

Views: 7

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದಲ್ಲಿರುವ ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ ವಿಶ್ವದಲ್ಲೇ ವಿಶಿಷ್ಟವಾದ ನೂರಾರು ಕಾಷ್ಠ ಶಿಲ್ಪದ ಮೂರ್ತಿಗಳ ಮೂಲಕ ಗಮನಸೆಳೆಯುತ್ತಿದೆ. ಇಲ್ಲಿನ ಪ್ರದಾನ ದೇವರಾದ ನಂದಿಕೇಶ್ವರ ಹಾಗೂ ಪರಿವಾರ ದೈವಗಳು ಕಾರಣೀಕ ಶಕ್ತಿಯನ್ನು ಹೊಂದಿದ್ದು, ಕ್ಷೇತ್ರದ ಮಹಿಮೆಯ ಕುರಿತು ಹಲವಾರು ಜಾನಪದ ಜನಜನಿತ ಕಥೆಗಳು ಕ್ಷೇತ್ರದ ಮಹತ್ವವನ್ನು ನಮಗೆ ತಿಳಿಸಿ ಕೊಡುತ್ತದೆ.
ಕ್ಷೇತ್ರದ ಐತಿಹ್ಯ :
ಜಾಬಾಲಿ ಸತ್ಯಕಾಮ ಮುನಿಗಳ ಆದೇಶದ ಮೇರೆಗೆ ಮಹಾರಾಜನೊಬ್ಬ ಈ ಸ್ಥಳದಲ್ಲಿ ಅಶ್ವಮೇಧ ಯಾಗ ಮಾಡಿದನು. ಯಾಗದ ಸಂದರ್ಭ ಆತ ಕುದುರೆಯನ್ನು ಕಟ್ಟಿದ ಸ್ಥಳ ಕುದ್ರೆಕಟ್ಟೆ ಎಂದು, ಮೇಕೆಯನ್ನು ಕಟ್ಟಿದ ಸ್ಥಳ ಮೆಕ್ಕೆಕಟ್ಟೆ ಎಂಬ ಹೆಸರು ಪಡೆಯಿತು ಎಂಬ ಪ್ರತೀತಿ ಇದೆ ಹಾಗೂ ‘ಜಂಬುಕೇಶ್ವರ ಎಂಬ ಸನ್ಯಾಸಿಯು’ ಮೆಕ್ಕೆಕಟ್ಟುವಿನಲ್ಲಿ ಯಜ್ಞಗಳನ್ನು ಮಾಡಿ ಶಿವನ ಪ್ರಮುಖ ಗಣಗಳನ್ನು ಪ್ರತಿಷ್ಠಾಪಿಸಿದನೆಂಬ ಮತ್ತು ತನ್ನ ಭಕ್ತನಾದ ರಾಜನೋರ್ವನನ್ನು ಯುದ್ಧದಿಂದ ಕಾಪಾಡುವ ಸಲುವಾಗಿ ದಂಡೆತ್ತಿ ಬಂದ ಸೈನ್ಯವನ್ನು ತಡೆದು ಯೋಧರು, ಆನೆ, ತುರಗ ಹಾಗೂ ಇನ್ನಿತರ ಸೇನಾ ತಂಡವನ್ನು ದೈವಿ ಶಕ್ತಿಯೊಂದು ಸ್ತಬ್ಧಗೊಳಿಸಿತು, ಅವುಗಳನ್ನು ಇದೀಗ ಕಾಷ್ಠಶಿಲ್ಪವಾಗಿ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಇಂಬು ನೀಡುವಂತೆ ಇಲ್ಲಿನ ಕಾಷ್ಠಶಿಲ್ಪಗಳ ಕೈಯಲ್ಲಿ ಬಿಲ್ಲು,ಬಾಣ, ಕೋವಿ ಮುಂತಾದ ಶಸ್ತ್ರಗಳು ಹೊಂದಿರುವುದು ನೋಡಬಹುದು.
ಜಾತ್ರೆಯ ದಿನ ಇಲ್ಲಿ ಶೆಡಿ ಉತ್ಸವ ನಡೆಯುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ದೇವಳಕ್ಕೆ ವಿಶೇಷ ಪ್ರೋತ್ಸಾಹ ದೊರಕಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಪೂಜಾದಿ ಕೈಂಕರ್ಯಗಳನ್ನು ನಡೆಸಲು ಜಂಬೂರು, ಶಿರ್ಣಿ ಮುಂತಾದ ಪ್ರದೇಶದಲ್ಲಿ ಜಮೀನು ಉಂಬಳಿಯಾಗಿ ಕೊಟ್ಟ ಕುರಿತು ಉಲ್ಲೇಖವಿದೆ.
- ಮನಸೆಳೆವ ಸುಂದರ ತಾಣ :
ನಂದಿಕೇಶ್ವರನ ದರ್ಶನ ಮಾಡಲು ಸೈಬ್ರಕಟ್ಟೆ ಬಿದ್ಕಲ್ಕಟ್ಟೆ ಮಾರ್ಗವಾಗಿ 3 ಕಿ.ಮೀ ಮುಂದೆ ಸಾಗಿದಾಗ ಕುದ್ರಿಕಟ್ಟೆಯಲ್ಲಿ ಬಲಬದಿಗೆ ವಿದೇಶಿ ಶೈಲಿಯಲ್ಲಿರುವ ಎತ್ತರದ ಸ್ವಾಗತ ಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಅರ್ಧ ಕಿ.ಮೀ ಮುಂದೆ ಸಾಗಿದರೆ ಹಸಿರು ಸಿರಿಯ ನಡುವೆ ನಂದಿಕೇಶ್ವರ ಸ್ವಾಮಿಯ ದೇವಸ್ಥಾನವಿದೆ. ದೇವಸ್ಥಾನ ಎದುರಿಗೆ ಮೂರು ಶಡಿ ಕಂಬಗಳು ಹಾಗೂ ಪ್ರಾಂಗಣದಲ್ಲಿ ಬೇಟೆಗಾರ ಗಣ ಹಸ್ರ ತಿಮ್ಮನ ಚಿಕ್ಕ ಗುಡಿ ಇದ್ದು, ಹೆಬ್ಬಾಗಿಲು ದಾಟಿ ಗರ್ಭ ಗುಡಿಯ ಪ್ರವೇಶ ದ್ವಾರದಲ್ಲಿ ಭೃಂಗಿ-ಶಂಗಿ, ಗರ್ಭ ಗುಡಿಯ ಒಳಗೆ ಪ್ರಧಾನ ದೇವ ನಂದಿಕೇಶ್ವರ, ಪಂಚಮುಖ ನಂದಿಯ ಮೇಲೆ ಆಸೀನಳಾದ ದುರ್ಗೆ, ಬಲಾನಂದಿ, ತ್ರಿಮುಖ ನಂದಿ, ಆಕಾಶ ನಂದಿ, ಆನೆ, ಸೇನೆ ಇದೆ. ಖೇಚರ ಭೈರವ, ಕಾಲ ಭೈರವ, ಉನ್ಮತ್ತ ಭೈರವ, ಖಟ್ಟಾಂಗ ಭೈರವ, ವಾರಾಹಿ ಪಂಜುರ್ಲಿ, ಗುಮ್ಮಟ ಮಲ್ಲ, ನರಪಾದ ನಂದಿ, ಉಮ್ಮಲ್ತಿ, ಸಣ್ಣಮ್ಮ, ಹೊನ್ನಮ್ಮ, ತ್ರಿಶಿರ ಬ್ರಹ್ಮ, ಹುಲಿದೇವರು ಮತ್ತು ಗರ್ಭಗುಡಿಯ ಉಪ್ಪರಿಗೆಯಲ್ಲಿ ಪ್ರಾಣಿ ಪಕ್ಷಿ ಸಪರಿವಾರಗಳ ಮೂರ್ತಿಗಳಿದ್ದು, ಹಿಂಭಾಗದ ಶಿಲಾ ವಿಗ್ರಹ ಹಾಗೂ ಬಾಗಿಲ ಬೊಬ್ಬರ್ಯ ಇದೆ.






