ಶಿಕ್ಷಣ

ಕಾಲೇಜು ಶುಲ್ಕಕ್ಕಾಗಿ ಪೋಷಕರು ನೀಡಿದ್ದ ಹಣ ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

Views: 88

ಬೆಂಗಳೂರು : ಕಾಲೇಜು ಶುಲ್ಕವನ್ನು ಆನ್‌ಲೈನ್ ಗೇಮ್‌ನಲ್ಲಿ ಕಳೆದಿದ್ದ ವಿದ್ಯಾರ್ಥಿನಿಯೊಬ್ಬಳು ಹಣ ಹೊಂದಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ವಿ. ವಿ ಹಾಸ್ಟೆಲ್‌ನಲ್ಲಿ ನಡೆದಿದೆ. ಕೋಲಾರದ ಶ್ರೀನಿವಾಸಪುರ ಮೂಲದ ಪಾವನ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಪಾವನ ಮೊದಲ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಮೂರು ದಿನ ರಜೆ ಇದ್ದಿದ್ದರಿಂದ ಹಾಸ್ಟೆಲ್‌ನಲ್ಲಿ ಸಹಪಾಠಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಭಾನುವಾರ ರಾತ್ರಿ ಒಬ್ಬಳೇ ಇದ್ದ ಪಾವನ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ವೇಳೆ ಆಕೆ ಬಳಸಿದ್ದ ಚೇರ್ ಕೆಳಗಡೆ ಬಿದ್ದು ಜೋರಾದ ಶಬ್ಧವಾಗಿದ್ದರಿಂದ ಪಕ್ಕದ ರೂಮ್‌ನ ಸಹಪಾಠಿಗಳು ಬಂದು ಗಮನಿಸಿದಾಗ ಪಾವನ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಮೃತದೇಹದ ಬಳಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಾವನ ಉಲ್ಲೇಖಿಸಿದ್ದಾಳೆ. ಆದರೆ, ತನಿಖೆ ವೇಳೆ ಪಾವನ ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೊಳಗಾಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ಕಾಲೇಜು ಶುಲ್ಕಕ್ಕಾಗಿ ಪೋಷಕರು ನೀಡಿದ್ದ ಹಣದಲ್ಲಿ ಆನ್‌ಲೈನ್ ಗೇಮ್‌ನಲ್ಲಿ 15 ಸಾವಿರ ರೂ. ಕಳೆದುಕೊಂಡಿದ್ದ ಪಾವನ, ಸ್ನೇಹಿತರ ಬಳಿ 10 ಸಾವಿರ ರೂ. ಹೊಂದಿಸಿದ್ದಳು. ಆದರೆ, ಉಳಿದ 5 ಸಾವಿರ ರೂ. ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Related Articles

Back to top button