ಇತರೆ

ಕಾಲೇಜಿನಲ್ಲಿ ವಾರಪೂರ್ತಿ ಕನ್ನಡ ಉಪನ್ಯಾಸ,ರಜೆ ಬಂತೆಂದರೆ ಶುಭ ಸಮಾರಂಭಗಳಿಗೆ ಸಂಬಂಧಿಕರಂತೆ ಬಂದು ಚಿನ್ನ, ಹಣ ಕಳ್ಳತನ:ಉಪನ್ಯಾಸಕಿ ಬಂಧನ

Views: 134

ಕನ್ನಡ ಕರಾವಳಿ ಸುದ್ದಿ: ಶುಭ ಸಮಾರಂಭಗಳಲ್ಲಿ ಸಂಬಂಧಿಕರಂತೆ ಬಂದು ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಅತಿಥಿ ಉಪನ್ಯಾಸಕಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರಂ ನಿವಾಸಿಯಾಗಿರುವ ರೇವತಿ ಬಂಧಿತ ಆರೋಪಿ. ಈಕೆ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಒಟ್ಟು 32 ಲಕ್ಷ ರೂಪಾಯಿ ಮೌಲ್ಯದ 262 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರೇವತಿ ಬೆಳ್ಳಂದೂರಿನ ಖಾಸಗಿ ಕಾಲೇಜಿನಲ್ಲಿ ವಾರಪೂರ್ತಿ ಕನ್ನಡ ಭಾಷೆಯ ಅತಿಥಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದಾಳೆ. ಭಾನುವಾರ ಬಂತೆಂದರೆ ಶುಭ ಸಮಾರಂಭಗಳು ನಡೆಯುವ ಸ್ಥಳಗಳಿಗೆ ಹೋಗಿ ಅಲ್ಲಿ ಸಿಕ್ಕವರ ಜೊತೆ ಸಂಬಂಧಿಕರಂತೆ ಆತ್ಮೀಯವಾಗಿ ಮಾತನಾಡಿಸುತ್ತಾಳೆ. ಬಳಿಕ ಚಿನ್ನಾಭರಣ, ಹಣ ಇಟ್ಟಿರುವ ಕೊಠಡಿಗಳನ್ನು ಪತ್ತೆ ಹಚ್ಚಿ, ಯಾರೂ ಇಲ್ಲದ ಸಮಯ ನೋಡಿಕೊಂಡು ಬ್ಯಾಗ್‌ಗಳಲ್ಲಿನ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 25ರಂದು ಇದೇ ರೀತಿ ಬಸವನಗುಡಿಯ ದ್ವಾರಕನಾಥ ಕಲ್ಯಾಣ ಮಂಟಪದಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಾಗ ರೇವತಿ ಸಿಕ್ಕಿಬಿದ್ದಿದ್ದಾಳೆ. ವಿಚಾರಣೆ ವೇಳೆ ಇನ್ನೂ ಮೂರು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

 

Related Articles

Back to top button
error: Content is protected !!