ಇತರೆ

ಕಾರು ಬೈಕ್ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಸಾವು

Views: 85

ಕನ್ನಡ ಕರಾವಳಿ ಸುದ್ದಿ: ಇನ್ನೋವಾ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ – ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಘಟನೆ ಸಂಭವಿಸಿದೆ.

ಮೃತರು ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಒಂದೇ ಕುಟುಂಬ ಮಹೇಶ್ (55), ಉದ್ವಿತಾ (3), ರತ್ನಮ್ಮ (60) ಹಾಗೂ ಬೈಕ್ ಸವಾರ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದ ಶ್ರೀನಾಥ್ ಎಂಬವರು ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಇನ್ನೋವಾ ಕಾರು ಮತ್ತು ಬೈಕ್ ನಜ್ಜುಗುಜ್ಜಾಗಿವೆ.

ಘಟನೆಯಲ್ಲಿ ಸುಶ್ಮಿತಾ, ವಿರಾಟ್, ಸುಜಾತಾ ಹಾಗೂ ಕಾರು ಚಾಲಕ ಅರುಣ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುಶ್ಮಿತಾ ತುಂಬು ಗರ್ಭಿಣಿಯಾಗಿದ್ದು, ಅಪಘಾತದಲ್ಲಿ ಆಕೆಯ ಹೊಟ್ಟೆಯಲ್ಲಿದ್ದ ಭ್ರೂಣ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಕಾರಿನ ಮಾಲೀಕ ಸಂತೋಷ್ ಕುಟುಂಬವು ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಸಂಬಂಧಿಕರೊಬ್ಬರ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ಕಾರಿನಲ್ಲಿ ತೆರಳಿದ್ದರು. ವಾಪಸ್ ಊರಿಗೆ ಬರುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟಿಲಿಂಗ ಕ್ಷೇತ್ರದಲ್ಲಿ ಮ್ಯಾನೇಜರ್ ಆಗಿರುವ ಸಂತೋಷ್ ಭಾನುವಾರ ತನ್ನ ಹುಟ್ಟುಹಬ್ಬವಾದ ಕಾರಣ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಕಮ್ಮಸಂದ್ರದಲ್ಲೇ ಉಳಿದುಕೊಂಡಿದ್ದು, ಕುಟುಂಬಸ್ಥರನ್ನು ಕಾರಿನಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಸಂಬಂಧಿಕರ ಯೋಗ ಕ್ಷೇಮ ವಿಚಾರಿಸಲು ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!