ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು: ಡಾ.ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮ

Views: 32
ಉಡುಪಿ: ಡಾ ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ಉಡುಪಿ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಶಿಕ್ಷಕರ ಸಂಘ ‘ಮಾನುಷ’ ಮತ್ತು ಐಕ್ಯೂಎಸಿ, ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 13 ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಡಾ.ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
‘ಡಾ ಗುರುರಾಜ್ ಭಟ್ ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆಗೆ ಮಾರ್ಗಸೂಚಿಯನ್ನು ರೂಪಿಸಿದ ವ್ಯಕ್ತಿಯಾಗಿದ್ದು ವಿಶೇಷವಾಗಿ ನಮ್ಮ ಜಿಲ್ಲೆಯ ತುಳುನಾಡಿನ ಸಂಶೋಧನೆಯ ಕ್ಷೇತ್ರದಲ್ಲಿ ನೂರಾರು ಸಂಶೋಧಕರನ್ನು ಸೃಷ್ಟಿಸಿದ ವ್ಯಕ್ತಿ’ ಎಂದು ಮೂಡುಬಿದಿರೆಯ ಹಿರಿಯ ಸಂಶೋಧಕ ಡಾ.ಪಿ.ಗಣಪಯ್ಯ ಭಟ್ ಹೇಳಿದರು.
ಅವರು ಕಾಲೇಜಿನ ಪ್ರಥಮ ಪ್ರಾಂಶುಪಾಲರಾದ ಡಾ.ಗುರುರಾಜ ಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಗುರುರಾಜ ಭಟ್ ಅವರ ಜೀವನ ಚರಿತ್ರೆ, ಕೊಡುಗೆಗಳು ಮತ್ತು ಸಾಧನೆಗಳನ್ನು ಅವರು ಸಮಗ್ರವಾಗಿ ಪ್ರಸ್ತುತಪಡಿಸಿದರು. ಇವರು ಶ್ರೇಷ್ಠ ಇತಿಹಾಸ ತಜ್ಞರಾಗಿದ್ದು, ಶಿಲ್ಪಕಲೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಮೈಲುಗಟ್ಟಲೆ ಬರಿಗಾಲಿನಲ್ಲಿ ನಡೆದು ಅಧ್ಯಯನ ಮಾಡುತ್ತಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, ಸಾಮಾಜಿಕ ಜಾಲತಾಣಗಳಿಲ್ಲದ ಆ ಐವತ್ತರ ದಶಕದಲ್ಲಿ ಅನನ್ಯ ಇತಿಹಾಸಕಾರ, ಸಂಶೋಧಕ ಗುರುರಾಜ ಭಟ್ ಜಗತ್ತಿಗೆ ತಿಳಿದಿರುವ ವ್ಯಕ್ತಿಯಾಗಿದ್ದು ನಮ್ಮ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು ಎಂಬುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ಶ್ರೀ ಪರಶುರಾಮ ಭಟ್, ಸದಸ್ಯರು, ಡಾ ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್, ಉಡುಪಿ, ಶ್ರೀ ಮುರಳೀಧರ ಉಪಧ್ಯಾಯ, ಹಿರಿಯ ಸಾಹಿತ್ಯ ವಿಶ್ಲೇಷಕರು, ಉಡುಪಿ, ಡಾ ಬಿ ಜಗದೀಶ್ ಶೆಟ್ಟಿ, ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ ಹಾಗೂ ರಾಬರ್ಟ್ ರೊಡ್ರಿಗಸ್, ಉಪಾಧ್ಯಕ್ಷರು ‘ಮಾನುಷ’ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕ ವೃಂದ, ವಿಧ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಡಾ.ಗುರುರಾಜ್ ಭಟ್ ಅವರ ಕುಟುಂಬ ಸದಸ್ಯರು ಹಾಗೂ ಸಹವರ್ತಿಗಳು ಉಪಸ್ಥಿತರಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಕನ್ನಡ ವಿಭಾಗದ ಡಾ ಹರಿಣಾಕ್ಷಿ ಎಂ ಡಿ ವಂದಿಸಿದರು. ರವಿನಂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.