ಕರ್ತವ್ಯದಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡು ಕೊಡಗಿನ ಯೋಧ ಆತ್ಮಹತ್ಯೆ
Views: 33
ಕನ್ನಡ ಕರಾವಳಿ ಸುದ್ದಿ:ಕರ್ತವ್ಯದಲ್ಲಿದ್ದಾಗಲೇ ಬಂದೂಕಿನಿಂದ ಗುಂಡು ಹೊಡೆದುಕೊಂಡು ಕೊಡಗಿನ ಸಿಆರ್‌ಪಿಎಫ್ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 4ರಂದು ದಕ್ಷಿಣ ಕಾಶ್ಮೀರದ ಪುಲ್ವಾಮ ಟ್ರಾಲ್ ಏರಿಯಾದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಯಡವಾರೆ ಗ್ರಾಮ ನಿವಾಸಿ ಕೀಜನ ಜೋಯ್ಯಪ್ಪ ಹಾಗೂ ವಿಶಾಲಾಕ್ಷಿ ದಂಪತಿ ಪುತ್ರ ಕೆ.ಜಿ.ನವೀನ್(40) ಮೃತ ಯೋಧರಾಗಿದ್ದಾರೆ.
ಸಿಆರ್ ಪಿಎಫ್ 108ನೇ ಬೆಟಾಲಿಯನ್ ಯೋಧರಾಗಿದ್ದ ಕೆ.ಜಿ.ನವೀನ್, 2007ರಲ್ಲಿ ಅರೆಸೇನಾ ಪಡೆಗೆ ಸೇರ್ಪಡೆಯಾಗಿದ್ದರು. ದಕ್ಷಿಣ ಕಾಶ್ಮೀರದ ಟ್ರಾಲ್ ಏರಿಯಾದ ಲಡಿಯಾರ ಕ್ಯಾಂಪ್ ರಕ್ಷಣಾ ವಾಚ್ ಟವರ್ ನಲ್ಲಿ ಮೇ 4ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕರ್ತವ್ಯದಲ್ಲಿದ್ದಾಗಲೇ ಕೆ.ಜಿ.ನವೀನ್ ಬಂದೂಕಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡಿನ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಇತರ ಸಿಬ್ಬಂದಿಗಳು ವಾಚ್ ಟವರ್ ಬಳಿ ಬಂದು ನೋಡಿದಾಗ ನವೀನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಅವರನ್ನು ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ದೇಹವನ್ನು ಪರೀಕ್ಷಿಸಿದ ಆರ್ಮಿ ಆಸ್ಪತ್ರೆ ವೈದ್ಯರು ನವೀನ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸಿಆರ್ ಪಿಎಫ್ ಕಚೇರಿ ಅಧಿಕಾರಿಗಳು ಈ ಕುರಿತು ಮೃತರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ದೇಹವನ್ನು ಬೆಂಗಳೂರಿನ ಯಲಹಂಕದಲ್ಲಿರುವ ಸಿಆರ್ ಪಿಎಫ್ ಕಚೇರಿಯಿಂದ ಮೇ 5ರ ರಾತ್ರಿ ಕೊಡಗಿಗೆ ತರಲಾಗುತ್ತದೆ. ನಂತರ ಕುಶಾಲನಗರ ಮಾರ್ಗವಾಗಿ ಸೋಮವಾರಪೇಟೆ ಯಡವಾರೆ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರ ಅಂತ್ಯಕ್ರಿಯೆ ಮೇ 6ರಂದು ಸ್ವಗ್ರಾಮದಲ್ಲಿ ನಡೆಯಲಿದೆ.






