ರಾಜಕೀಯ

ಒಂದೇ ವೇದಿಕೆಯಲ್ಲಿ ಬಿ.ಎಲ್.ಸಂತೋಷ್ – ಡಿ.ಕೆ.ಶಿವಕುಮಾರ್ ಸಮಾಲೋಚನೆ…ರಾಜಕೀಯ ವಲಯದಲ್ಲಿ ಭಾರಿ ಚರ್ಚೆ! 

Views: 97

ಕನ್ನಡ ಕರಾವಳಿ ಸುದ್ದಿ: ಸೌಹಾರ್ದಯುತ ರಾಜಕಾರಣಕ್ಕೆ ಹೊಸ ಮುನ್ನುಡಿ ಎನ್ನುವಂತೆ ಸದಾ ಕಾಲ ರಾಜಕೀಯವಾಗಿ ಪರಸ್ಪರ ಟೀಕೆ-ಪ್ರತಿ ಟೀಕೆಗಳಲ್ಲಿ ತೊಡಗಿಕೊಳ್ಳುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಆತ್ಮೀಯವಾಗಿ ಹರಟಿದ್ದು ಎಲ್ಲರ ಗಮನ ಸೆಳೆಯಿತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ‘ತರಳಬಾಳು ಹುಣ್ಣಿಮೆ’ ಮಹೋತ್ಸವದ ‘ಸರ್ವಧರ್ಮ ಸಮನ್ವಯ ಸಭೆ’ ಈ ಇಬ್ಬರು ಧ್ರುವತಾರೆಗಳ ಭೇಟಿಗೆ ವೇದಿಕೆಯಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಎಲ್. ಸಂತೋಷ್ ಆಗಮಿಸಿದ್ದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವೇದಿಕೆಗೆ ಡಿ.ಕೆ. ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ, ಬಿ.ಎಲ್. ಸಂತೋಷ್ ಅವರು ಎದ್ದು ನಿಂತು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಸುಮಾರು 10 ನಿಮಿಷಗಳ ಕಾಲ ಇಬ್ಬರೂ ನಾಯಕರು ಅಕ್ಕಪಕ್ಕದಲ್ಲೇ ಕುಳಿತು ನಗುನಗುತ್ತಾ ಸಮಾಲೋಚನೆ ನಡೆಸಿದರು. ರಾಜಕೀಯ ಜಿದ್ದಾಜಿದ್ದಿನ ನಡುವೆಯೂ ವೈಯಕ್ತಿಕ ಸ್ನೇಹ ಮತ್ತು ಶಿಷ್ಟಾಚಾರವನ್ನು ಮೆರೆದ ಈ ದೃಶ್ಯ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು.

ಸಾಮಾನ್ಯವಾಗಿ ಬಿ.ಎಲ್. ಸಂತೋಷ್ ಮತ್ತು ಡಿ.ಕೆ. ಶಿವಕುಮಾರ್ ಅತಿ ವಿರಳವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಸಾರ್ವಜನಿಕವಾಗಿ ಇಷ್ಟು ಆತ್ಮೀಯವಾಗಿ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ವಧರ್ಮ ಸಮನ್ವಯ ಸಭೆಯ ಆಶಯಕ್ಕೆ ತಕ್ಕಂತೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಬ್ಬರು ನಾಯಕರು ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.

Related Articles

Back to top button
error: Content is protected !!