ಐತಿಹಾಸಿಕ ಕೋಟೇಶ್ವರದ ಕೊಡಿ ಹಬ್ಬಕ್ಕೆ ಚಾಲನೆ
Views: 144
ಕುಂದಾಪುರ :ಇದೇ ಡಿಸೆಂಬರ್ 15 ನೇ ಆದಿತ್ಯವಾರ ನಡೆಯುವ, ಕರಾವಳಿ ಕರ್ನಾಟಕದ ಐತಿಹಾಸಿಕ ಕೊಡಿಹಬ್ಬಕ್ಕೆ ಸೋಮವಾರ ನಸುಕಿನಲ್ಲಿ ರಥ ಮುಹೂರ್ತ ನೆರವೇರಿಸುವುದರೊಂದಿಗೆ ಹಬ್ಬದ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ.
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕೋಟೇಶ್ವರದ ಇತಿಹಾಸ ಪ್ರಸಿದ್ಧ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವನ್ನು “ಕೊಡಿಹಬ್ಬ”” ಎಂದೇ ಕರೆಯಲಾಗುವುದು. ಹಬ್ಬದ ಋತುವಿನ ಮೊದಲ ಹಬ್ಬವಾದ ಇದು ಹಲವು ಆರಂಭಗಳಿಗೆ ಕಾರಣವಾಗುವುದರಿಂದ “ಕೊಡಿಹಬ್ಬ” ಎಂಬ ಅನ್ವರ್ಥ ಹೆಸರು ಬಂದಿದೆ.
ರಥೋತ್ಸವಕ್ಕಾಗಿ ಇಲ್ಲಿನ ಬ್ರಹ್ಮರಥವನ್ನು ಪತಾಕೆ, ಚಿತ್ರಪಟಗಳು, ಅಟ್ಟೆಗಳನ್ನು ಜೋಡಿಸಿ ಸಿಂಗರಿಸುವ ಕಾರ್ಯಾರಂಭವೇ ರಥಮುಹೂರ್ತ. ಇದನ್ನು ರಥ ಕಟ್ಟುವುದು ಎನ್ನಲಾಗಿತ್ತದೆ. ಈ ಪ್ರಾಚೀನ ಆರು ಚಕ್ರಗಳ ಬ್ರಹ್ಮರಥವನ್ನು ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪನಾಯಕ ನಿರ್ಮಿಸಿಕೊಟ್ಟಿದ್ದರು ಎನ್ನಲಾಗಿದೆ. ಅವರೇ ದೇವಳ ಗರ್ಭಗುಡಿಗೆ ತಾಮ್ರದ ತಗಡು ಹೊದೆಸಿ ನಂದಿ ಮಂಟವನ್ನು ನಿರ್ಮಿಸಿಕೊಟ್ಟರು ಎಂದು ದಾಖಲೆಗಳು ಸಾರುತ್ತವೆ.
ಶಾಸ್ತ್ರೀಯವಾಗಿ ಈ ಆರು ಚಕ್ರಗಳ ಮಹಾ ರಥವನ್ನು “ಸ್ಯಂದನ ಮಹಾರಥ” ಎಂದು ಕರೆಯಲಾಗುವುದು. ಅಡಿಪಾಯ, ಅಧಿಷ್ಠಾನ ಮತ್ತು ಮಂಟಪ ಎಂಬ ಮೂರು ಹಂತಗಳಿರುವ ಈ ರಥದ ಹೊರಮೈಯಲ್ಲಿ ಕಡಾವು ಹೂಬಳ್ಳಿ, ಅಷ್ಟದಿಕ್ಪಾಲಕರು, ಚತುರ್ವಿಧ ಮೋಕ್ಷಗಳನ್ನು ಬಿಂಬಿಸುವ ವಿವಿಧ ಸುಂದರ ಕೆತ್ತನೆಗಳಿವೆ. ಅಡಿಪಾಯದಿಂದ ಮಂಟಪದವರೆಗಿನ ಸ್ಥಿರರಥವನ್ನು ‘ರಥದ ಗಡ್ಡೆ’ ಎನ್ನುವರು. ಈ ಗಡ್ಡೆಯ ಮಂಟಪದ ಮೇಲಿನಿಂದ ಬಿದಿರು, ಅಡಿಕೆ ದಬ್ಬೆಗಳಿಂದ ರಚಿಸಿದ ಗೂಡುಗಳನಿಟ್ಟು ಕೆಂಪು, ಬಿಳಿ ನಿಶಾನೆ ಪತಾಕೆಗಳು, ಕಳಸಗಳಿಂದ ಅಲಂಕರಿಸಲಾಗುತ್ತದೆ. ರಥ ಕಟ್ಟುವ ಈ ಎಲ್ಲಾ ಕಾರ್ಯಗಳನ್ನು ಪಾರಂಪರಿಕವಾಗಿ ದೇವಾಡಿಗ ಸಮುದಾಯದವರು ಭಕ್ತಿಯಿಂದ ಮಾಡುತ್ತಾರೆ. ರಥೋತ್ಸವದ ದಿನ ಹೂವು, ಬಾಳೆ, ಕಬ್ಬು, ಬಿದಿರು, ಮಾವಿನಕಾಯಿ ಗೊಂಚಲು, ಹಲಸಿನ ಕಡಿಗೆ, ಬಾಳೆಗೊನೆ, ತಳಿರು ತೋರಣಗಳಿಂದ ರಥವನ್ನು ಅಲಂಕರಿಸಿ, ಶ್ರೀ ಕೋಟಿಲಿಂಗೇಶ್ವರ ದೇವರನ್ನು ರಥದಲ್ಲಿ ಕೂರಿಸಿ ಎಲ್ಲರೂ ಒಂದಾಗಿ ರಥ ಎಳೆದು ಸಂಭ್ರಮಿಸುತ್ತಾರೆ. ರಥಾರೂಢನಾದ ಕೋಟಿಲಿಂಗೇಶ್ವರನ ದರ್ಶನ ಮಾಡಿದರೆ ಮತ್ತೆ ಪುನರ್ಜನ್ಮವಿಲ್ಲ ಎಂಬುದು ನಂಬಿಕೆ.
ಸೋಮವಾರ ನಸುಕಿನ 5 ಗಂಟೆಯ ವೇಳೆಗೆ ದೇವಳದ ತಂತ್ರಿ ಪ್ರಸನ್ನಕುಮಾರ ಐತಾಳರ ಉಪಸ್ಥಿತಿಯಲ್ಲಿ ಪರ್ಯಾಯ ಅರ್ಚಕ ಪರಮೇಶ್ವರ ಐತಾಳ, ಶ್ರೀಪತಿ ಐತಾಳ ರಥ ಮುಹೂರ್ತದ ಪೂಜೆ, ಸಂಕಲ್ಪಗಳನ್ನು ನೆರವೇರಿಸಿದರು.
ನಂತರ ದೇವಾಲಯದಲ್ಲಿ ಪ್ರಾಕಾರ ಶುದ್ಧಿ, ಮುಹೂರ್ತ ಬಲಿ ನೆರವೇರಿಸಲಾಯಿತು. ಈ ವೇಳೆ ದೇವಾಲಯದ ಆಡಳಿತಾಧಿಕಾರಿಣಿ, ಕುಂದಾಪುರದ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಸದಸ್ಯ ಮಂಜುನಾಥ ಆಚಾರ್ಯ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಸನ್ನಿಧಿಯಲ್ಲಿ ಶ್ರೀ ಶಿವ ಸಹಸ್ರನಾಮಾವಳಿ ಪಠಣ, ಸಂಜೆ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿ ಮತ್ತು ಮಹಿಳಾ ವೇದಿಕೆಯವರಿಂದ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ, ಭಜನೆ, ಶ್ರೀ ಬ್ರಾಹ್ಮೀ ಮಹಿಳಾ ವೇದಿಕೆ, ಕೋಟೇಶ್ವರ ಇವರಿಂದ ಶ್ರೀ ವಿಷ್ಣು ಸಹಸ್ರನಾಮ, ಭಗವದ್ಗೀತೆ ಪಠಣ, ಆಸ್ತಿಕ ಸಮಾಜದ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ಭಜನಾ ಮಂಡಳಿ, ಹೊದ್ರಾಳಿ ಮತ್ತು ಶ್ರೀ ಬಸವನಗುಡಿ ಭಜನಾ ಮಂಡಳಿ, ಕೋಟೇಶ್ವರ ಇವರಿಂದ ಭಜನೆ ಕಾರ್ಯಕ್ರಮಗಳು ನಡೆದವು.