ಏನಿದು ಪ್ರೇತ ಮದುವೆ? ಪತ್ರಿಕೆಯಲ್ಲಿ ನೀಡಲಾದ ಮದುವೆಯ ಜಾಹೀರಾತು ಬಾರಿ ವೈರಲ್..!

Views: 228
ಕರಾವಳಿ ಭಾಗದದಲ್ಲಿ ಪ್ರೇತಗಳ ಮದುವೆ ಅನ್ನೋದು ಮತ್ತೊಂದು ವಿಶೇಷ. ಪ್ರತಿ ವರ್ಷದ ಆಷಾಢ ಮಾಸದಲ್ಲಿ ತುಳುವಿನಲ್ಲಿ ಇದನ್ನು ಆಟಿ ತಿಂಗಳು(ಆಟಿ ತಿಂಗಳು ಎಂದರೆ ಪ್ರೇತಗಳ ತಿಂಗಳು) ಎಂದು ಕರೆಯುತ್ತಾರೆ. ಈ ಆಷಾಢ ತಿಂಗಳಲ್ಲಿ ಹೀಗೆ ಪ್ರೇತಗಳಿಗೆ ಇಲ್ಲಿ ಮದುವೆ ಮಾಡುತ್ತಾರೆ. ಮದುವೆ ಆಗುವ ಮುಂಚೆ ಅಪ್ರಾಪ್ತ ವಯಸ್ಸಿನಲ್ಲಿ ದುರ್ಮರಣಕ್ಕೀಡಾದವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ. ಹೀಗಾಗಿ ಇವರಿಗೆ ಮೋಕ್ಷ ಕಲ್ಪಿಸುವ ಉದ್ದೇಶದಿಂದ ಈ ಪ್ರೇತ ಮದುವೆ ಈ ಭಾಗದಲ್ಲಿ ನಡೆಸುತ್ತಾರೆ.
ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ: ಜಾಹೀರಾತು ವೈರಲ್..! ಏನಿದು ಸಂಪ್ರದಾಯ ಗೊತ್ತಾ ಪ್ರೇತ ಮದುವೆಯ ಉದ್ದೇಶವೇನು? ಹೀಗೆ ಮದುವೆಗಿಂತ ಮುಂಚೆ ಯಾರಾದರೂ ಹುಡುಗಿ ಅಥವಾ ಹುಡುಗ ಸತ್ತರೆ. ಅವರು ಕುಟುಂಬದಲ್ಲಿರುವ ಯವ್ವನಕ್ಕೆ ಬಂದಿರುವ ಯುವಕ-ಯುವತಿಯರಿಗೆ ಕೀಟಲೆ ಅಥವಾ ಸಮಸ್ಯೆ ಕೊಡಲು ಆರಂಭಿಸುತ್ತಾರೆ. ಅನೇಕರಿಗೆ ಮದುವೆ ಆಗದೆ ಇರಲು ಈ ಪ್ರೇತಗಳೇ ಕಾರಣ ಎನ್ನುತ್ತಾರೆ. ಹೀಗಾಗಿ ಇವುಗಳಿಗೆ ಮದುವೆ ಮಾಡಿ ಅವರನ್ನು ಸಂತೃಪ್ತಿಪಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕಾಗಲಿ ಅಥವಾ ತಮ್ಮ ಕುಟುಂಬದ ಮುಂದಿನ ಪೀಳಿಗೆಗಾಗಲಿ ಯಾವುದೇ ತೊಂದರೆ ಬಾರದಿರಲಿ ಎಂಬುದು ಪ್ರೇತ ಮದುವೆಯ ಮೂಲ ಉದ್ದೇಶ. ಮದುವೆ ಮಾಡಿಸಿದ ಮೇಲೆ ಅತೃಪ್ತ ಆತ್ಮ ಸಂತೃಪ್ತವಾಗುವ ಮೂಲಕ ಮನೆಯವರಿಗೆ ಉಪದ್ರವ ನೀಡುವುದು ನಿಲ್ಲಿಸುತ್ತದೆ. ಅಲ್ಲದೇ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ.
ಆದರೆ ಇತ್ತೀಚಿಗೆ ಪತ್ರಿಕೆಯಲ್ಲಿ ನೀಡಲಾದ ಮದುವೆಯ ಜಾಹೀರಾತು ಬಾರಿ ವೈರಲ್ ಆಗಿದೆ, ಅದರಲ್ಲಿ ಕುಟುಂಬವೊಂದು 30 ವರ್ಷಗಳ ಹಿಂದೆ ತೀರಿ ಹೋಗಿರುವ ಮಗಳಿಗೆ ಜೋಡಿಯನ್ನು ಹುಡುಕುತ್ತಿದೆ. ಈ ಸುದ್ದಿ ಕೇಳಿ ನಿಮಗೆ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯ. ಹಾಗಾದರೆ ಏನಿದು? ಸತ್ತವರಿಗೇಕೆ ಮದುವೆ? ಜಾಹೀರಾತಿನ ಹಿನ್ನೆಲೆಯೇನು? ಇಲ್ಲಿದೆ ಮಾಹಿತಿ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕುಟುಂಬವೊಂದು “ತಮ್ಮ ಮಗಳು 30 ವರ್ಷಗಳ ಹಿಂದೆ ನಿಧನಗೊಂಡಿದ್ದು, ನಮಗೆ 30 ವರ್ಷಗಳ ಹಿಂದೆ ನಿಧನರಾದ ವರನ ಅಗತ್ಯವಿದೆ. ಅಂತಹ ಯಾವುದೇ ವರನಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ” ಎಂದು ಪತ್ರಿಕೆಯೊಂದಕ್ಕೆ ಜಾಹೀರಾತನ್ನು ನೀಡಿದ್ದಾರೆ. ಈ ಜಾಹೀರಾತಿನ ಜೊತೆಗೆ, ಮೃತ ಹುಡುಗಿಯ ವಿವರಗಳನ್ನು ಸಹ ಸೇರಿಸಲಾಗಿದೆ. ಈ ಸುದ್ದಿ ನಮಗೆ ಆಶ್ಚರ್ಯವನ್ನುಂಟು ಮಾಡಬಹುದು ಆದರೆ ಕರಾವಳಿ ಭಾಗದ ಅದರಲ್ಲಿಯೂ ತುಳುನಾಡಿನ ಜನತೆಗೆ ಹೊಸದಲ್ಲ. ಜೊತೆಗೆ ಇದು ಅಪಹಾಸ್ಯ ಮಾಡುವ ವಿಷಯವೂ ಅಲ್ಲ. ಏಕೆಂದರೆ ಸತ್ತವರ ಮದುವೆಯನ್ನು ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ಇದೊಂದು ನಂಬಿಕೆ, ಹಾಗಾಗಿ ಈ ಬಗ್ಗೆ ಗೊತ್ತಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು.
ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಸುಮಾರು 50ಕ್ಕೂ ಹೆಚ್ಚು ಜನರು ಸಂಬಂಧಗಳನ್ನು ಕಳುಹಿಸಿದ್ದು ಶೀಘ್ರದಲ್ಲೇ ಎಲ್ಲಾ ರೀತಿಯ ಆಚರಣೆಗಳನ್ನು ಮಾಡಿ ಮದುವೆ ದಿನಾಂಕ ನಿಗದಿಯಾಗಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.






