ರಾಜಕೀಯ

ಎಚ್‌ಡಿಕೆ ಖಾಲಿ ಡಬ್ಬ ಇದ್ದಂತೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

"ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲಲು ಆಗಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇವರ ಮೈತ್ರಿ ಕುರುಡ-ಎಳವನ ಮೈತ್ರಿಯಂತೆ" -ಸಿದ್ದರಾಮಯ್ಯ

Views: 16

ಮೈಸೂರು:ಜೆಡಿಎಸ್ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಕುಮಾರಸ್ವಾಮಿ ಖಾಲಿ ಡಬ್ಬ ಇದ್ದಂತೆ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಹಾಗೆ ಹತಾಶರಾಗಿ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸರ್ಕಾರ ಬೀಳುವ ಸಂದರ್ಭದಲ್ಲಿ ಕುಮಾರಸ್ವಾಮಿ ಅಮೆರಿಕಾ ಪ್ರವಾಸದಲ್ಲಿದ್ದರು. ಅವರು ಅಧಿಕಾರದಲ್ಲಿದ್ದ ಒಂದು ವರ್ಷ ಎರಡು ತಿಂಗಳು ಪೂರ್ಣ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದರು. ಶಾಸಕರನ್ನಾಗಲಿ, ಸಚಿವರನ್ನಾಗಿ ಭೇಟಿ ಮಾಡಲಿಲ್ಲ. ಹೀಗಿರುವಾಗ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುವುದು ಅರ್ಥವಿಲ್ಲದ್ದು. ರಾಜಕೀಯ ಹತಾಶೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಶ್ವಾಸ ಮತ ಕೋರಿದ್ದ ಸಂದರ್ಭದಗಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಈ ಸರ್ಕಾರ ಬೀಳಲು ಬಿಜೆಪಿಯೇ ಕಾರಣ ಎಂದು ವಿಧಾನಸಭೆಯಲ್ಲಿ ಹೇಳಿದ ದಾಖಲೆ ಇದೆ. ಬೇಕಾದರೆ ಈ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ ಅವರು, ಈಗ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ವಿಧಾನಸಭೆಯನ್ನೇ ತಪ್ಪುದಾರಿಗೆ ಎಳೆದಂತೆ ಎಂದು ಹರಿಹಾಯ್ದರು.

ಬಿಜೆಪಿಯವರಿಗಿಂತ ಕುಮಾರಸ್ವಾಮಿ ಹೆಚ್ಚು ರಾಜಕೀಯವಾಗಿ ಹತಾಶರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲಲು ಆಗಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇವರ ಮೈತ್ರಿ ಕುರುಡ-ಎಳವನ ಮೈತ್ರಿಯಂತೆ ಎಂದು ವ್ಯಂಗ್ಯವಾಡಿದ ಅವರು, ಅವರ ಮೇಲೆ ಇವರು ಅವಲಂಬಿತರಾಗಿದ್ದಾರೆ, ಇವರ ಮೇಲೆ ಅವರು ಅವಲಂಬಿತರಾಗಿದ್ದಾರೆ ಎಂದು ಗೇಲಿ ಮಾಡಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ವಿಲನ್ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮಿಸ್ಟರ್ ಕುಮಾರಸ್ವಾಮಿಯೇ ರಾಜಕೀಯ ವಿಲನ್ ಎಂದು ತಿರುಗೇಟು ನೀಡಿದರು ಕುಮಾರಸ್ವಾಮಿ ಏನೆನೋ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡಲ್ಲ. ಖಾಲಿ ಡಬ್ಬ ಜಾಸ್ತಿ ಶಬ್ದ ಮಾಡುತ್ತದೆ. ತುಂಬಿದ ಕೊಡ ತುಳುಕಲ್ಲ ಎಂದು ಸಿದ್ಧರಾಮಯ್ಯ ಮಾರ್ಮಿಕವಾಗಿ ಹೇಳಿದರು.

Related Articles

Back to top button
error: Content is protected !!